ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಏಪ್ರಿಲ್ 30, 2011

ನನ್ನ ಮರೆತು ಬಿಡು


ನಾ ದೂರ ಹೋದರು 
ನೀ ಬಂದೆ ಹತ್ತಿರ 
ನಾ ಓದಿ ಹೊರಟರು 
ನಿನಗೆ ಕಾಡುವ ಆತುರ 
ನೀ ಬರಬಾರದೆಂದು 
ಮುಚ್ಚಿದ್ದೆ ನಾ ಬಾಗಿಲು 
ಕಿಟಕಿಯಿಂದ ಬಂದೆ ನೀ 
ನನ್ನನ್ನು ನೋಡಲು 
ಸ್ಪರ್ಶ ಸುಖಕೆ ಹಾತೊರೆದು 
ಬಂದಿಹನು ನೋಡು 
ಸದ್ದಿಲ್ಲದೇ ಮುತ್ತು ಕೊಟ್ಟ 
ಕಳ್ಳ ನಲ್ಲ ನೋಡು 
ತುಟಿಯ ಅಂಚಿನಲ್ಲಿ 
ಬಣ್ಣವು ಕೆಂಪು 
ಚಪ್ಪಾಳೆಗೆ ಸಿಲುಕೆ 
ಸೊಳ್ಳೆ ಆಯಿತು ಚಿಪ್ಪು ...

ಹುಡುಗಿ


ಹಡೆದವ್ವ ನೀಡುವಳು ತುತ್ತು 
ಮಮತೆಯ ಸಾಗರಕೆ ಸೇರುವ ಮುನ್ನ 
ತೊದಲು ನುಡಿಗೆ ಮುತ್ತು ಕೊಟ್ಟಾಗ 
ತಾಯಿಯ ಒಲವಿನ ಸಂಕೇತವು 
ನೆನಪಿನಲ್ಲಿ ಮುಳುಗಿದ ಹುಡುಗಿಗೆ 


ಆಗಸದಿಂದ ಬರುವ ಮುತ್ತು 
ನೆಲಕೆ ಮುತ್ತಿಡುವ ಮುನ್ನ 
ಕೆನ್ನೆಯ ಮೇಲೆ ಕುಣಿದಾಡುವಾಗ
ರೋಮಾಂಚನ ಪ್ರೀತಿ ಸಂಕೇತವು 
ಮಳೆಯಲ್ಲಿ ನೆನೆದ ಹುಡುಗಿಗೆ ..

ಕಾಲೇಜಿಗೆ ಹೋಗುವ ಹೊತ್ತು 
ಬಯಕೆಯು ಚಿಗುರುವ ಮುನ್ನ 
ಮನವು ಸುಮ್ಮನೆ ನಗುತಿರುವಾಗ 
ಗೆಳೆಯನ ಪ್ರೀತಿ ಸಂಕೇತವು 
ಸುಂದರವೆನಿಸಿದೆ ಜೀವನ ಹುಡುಗಿಗೆ ..
ಹರುಷ ತಂದ ವರುಷ


ಮದುವೆಯಾದ ವರುಷದಲಿ 
ಸತಿಪತಿಗಳಿಬ್ಬರು ಹರುಷದಲಿ 

ಮುಂಜಾವಿನ ಹೊತ್ತಲ್ಲಿ 
ಅಪ್ಪಿದ್ದರು ಕನಸಿನಲಿ 

ಕಣ್ತೆರೆದು ನೋಡಿದಾಗ 
ನಕ್ಕಿದ್ದರು ಮನಸಿನಲಿ 

ಮುತ್ತಿಟ್ಟು ಓಡಿದಾಗ
ಕರಗಿದ್ದರು ನಾಚಿಕೆಯಲಿ 

ಮರೆತಿದ್ದರು ಲೋಕವನ್ನು 
ಸ್ಪರ್ಶದ ಸುಖದಲಿ 

ಹತ್ತಿದರು ಮಂಚವನು 
ಪ್ರೀತಿಯ ನಶೆಯಲ್ಲಿ 

ರವಿ ಮೂಡಿ ಬೆಳಕಾದರೂ 
ತೆಲಿದ್ದರು ಚಂದ್ರಮನ ಲೋಕದಲಿ 

ಪ್ರೇಮದ ಹನಿ ಸವಿದು 
ಮದುವೆಯಾದ ವರುಷದಲಿ 
ಸತಿಪತಿಗಳಿಬ್ಬರು ಹರುಷದಲಿ ಉಲ್ಲಾಸಮೊದಲ ಸಲ ನಿನ್ನ ಕಂಡಾಗ 
ಕಪ್ಪೆ ಚಿಪ್ಪಿನ ಮುತ್ತಾಗಿ 
ಮನದಲ್ಲಿ ಬಚ್ಚಿಕೊಂಡಿದ್ದೆ 

ಮುಂಗಾರು ಮಳೆಯಲಿ ಕೊಡೆಯಾಗಿ
ಬಿಸಿಲಿನಲ್ಲಿ ತಂಗಾಳಿಯಾಗಿ 
ಕಾಲಕ್ಕೆ ಜ್ಪ್ತೆಯಾಗಳು ಬಂದಿದ್ದೆ 

ಆಸೆಯೆಂಬ ಬಣ್ಣದ ಕಾಮನಬಿಲ್ಲಾಗಿ 
ಕೋಗಿಲೆ ಧ್ವನಿಯ ಇಂಪಾಗಿ 
ನಲಿದು ಗರಿ ಬಿಚ್ಚಿ ಕುಣಿದಿದ್ದೆ 

ಗುರುವಾರ, ಏಪ್ರಿಲ್ 28, 2011

ಪೆನ್ನಿಗಾಗಿ

ಏನೆಂದು ಬರೆಯಲಿ ಕವನದಲಿ 
ಪದಗಳು ಸಾಲಾಗಿ ಬಂದಿವೆ 
ಪ್ರಾಸಗಳು ನಾ ಮುಂದು ಎಂದಿವೆ 
ನೆನಪುಗಳು ಅರಸನಾಗಿ ಆಳಿವೆ 
ಭಾವನೆಗಳು ಹಬ್ಬ ಆಚರಿಸಿವೆ 
ಮೌನ ಹೃದಯಕೆ ಅಂಟಿಕೊಂಡಿದೆ 
ನಗುವು ಅಕ್ಷರಕೆ  ಪಾಠ  ಹೇಳಿದೆ 
ಆಸೆಯು ಕಲಾಕುಂಚದಲಿ ಅರಳಿದೆ 
ಮನಸಿನ ಪುಟಕೆ ಖುಷಿಯಾಗಿದೆ ಸೋಮವಾರ, ಏಪ್ರಿಲ್ 25, 2011

ಬೇಸರವೇಕೆ ?ಕಪ್ಪು ಮೋಡಗಳೇ ಏಕಿಷ್ಟು ಬೇಸರ 
ಮೌನವೇಕೆ ಮನದಲಿ ಕೊರಗುತಿಹನು ನೇಸರ 

ತಂಗಾಳಿ ಮೇಲೇಕೆ ಸಿಟ್ಟು 
ಬಿಸಿಲು ಕುಂದಿದೆ ತಲೆ ಕೆಟ್ಟು 
ನಿನ್ನ ಕೋಪಕೆ ಏನು ಕಾರಣ 
ಪ್ರೀತಿಯಿಂದ ಕೇಳಿದ ವರುಣ 
ಮುಗಿಲಿನ ಬೇಸರಕೆ ನಾನಾದೆ ಮೋಡ
ಕವಿ ಮನ ನುಡಿದಿದೆ ದು:ಖಿಸ ಬೇಡ 
ಸುಂದರವಾಗಿ ವರ್ಣಿಸಿದ ಕವಿ ಕಪ್ಪು ಕಾರ್ಮೋಡ 
ಖುಷಿಯಾದ ಮೋಡ ಕರಗಿದೆ ನೋಡ 
ದು:ಖದ ಹನಿಗಳು ಖುಷಿಯಾಗಿ ಕೊಟ್ಟು 
ಮನಗಳ ಬೇಸರ ಓಡಿಸಿ ಬಿಟ್ಟು 
ಸ್ವಾತಿ ಮುತ್ತಿನ ಮಳೆಹನಿಯಾಗಿ 
ಸಂತಸದ ಮಾತು ಕವಿಗಲಿಗಾಗಿ 
ಹನಿ ಹನಿಗಳ ಪದ ಜೋಡಿಸಿ 
ಕವನ ಬರೆದ ಪ್ರೀತಿ ಮೂಡಿಸಿ 
ಕೊನೆಯಾಗಿದೆ ನೋವು ಮೋಡಗಳಿಗೆ 
ಸಂತೋಷ ಮೂಡಿದೆ ಪ್ರಕೃತಿಯ ಸೌಂದರ್ಯಕೆ

ಕಪ್ಪು ಮೋಡಗಳೇ ಏಕಿಷ್ಟು ಬೇಸರ 
ಮೌನವೇಕೆ ಮನದಲಿ ಕೊರಗುತಿಹನು ನೇಸರ 
.

ಪ್ರೀತಿಯಲ್ಲಿರುವೆ ನಲ್ಲ ..

.

ನಲ್ಲ , ನಿನ್ನ ವರ್ಣನೆ ಬಲು ಚೆನ್ನ 
ಸಂಜೆಯ ಹೊತ್ತಲ್ಲಿ ನಾ ನಿನ್ನ ಪಕ್ಕಕೆ 
ಮೌನ ಮಾತಾಡಿ ಪ್ರೀತಿಸು ಎಂದಿದೆ 

ನಲ್ಲ , ನಿನ್ನ ಪ್ರೀತಿಸುವ ಬಯಕೆ 
ಏಕಾಂತ ತಂದಿದೆ ಬೆಟ್ಟದಷ್ಟು ಕೊರತೆ 
ರೆಕ್ಕೆ ಬಿಚ್ಚಿ ಜೊತೆಯಲಿ ಹಾರುವ ಎಂದಿದೆ 

ನಲ್ಲ , ನಿನ್ನ ಮನಸ್ಸು ಕಾಮನಬಿಲ್ಲು 
ಬಣ್ಣ ತುಂಬಿದೆ ಪ್ರೀತಿಯ  ಹನಿಯಲ್ಲೂ 
ಪ್ರೇಮದ ಹೊಳೆಯಲಿ ಹರಿಯುವಾ ಎಂದಿದೆ 


ನೀನು ಕೆಟ್ಟವ


ಏಕೆ ಹುಟ್ಟಿಸಿದ ದೇವರು 
ಪಾಪಿ ಹೃದಯವನ್ನು 
ನೆಮ್ಮದಿಯನು ಹಾಳು ಮಾಡುವ 
ರಾಕ್ಷಸ  ಸ್ವಭಾವದವನ 
ಬೆಳಕನ್ನು ಇರುಳಾಗಿಸುವ
ಕೆಟ್ಟ ಬಯಕೆಯನ್ನು 
ನಂಬಿಕೆಯ ಚಿಹ್ನೆ ಅಳಿಸಿ 
ಮೋಸದ ಬಾವುಟ  ಹಾರಿಸುವವನ 

ಪ್ರೀತಿ ಕಿತ್ತೆಸೆದು ದ್ವೇಷ 
ಬೆಳೆಸುವ ಕ್ರೂರಿಯನ್ನು 
ಸತ್ಯದ ಸಂತೆಯಲಿ 
ಸುಳ್ಳು ದುರಾಸೆಯ ಹುಟ್ಟಿಸುವವನ
ಸಂಬಂಧಗಳ ಅವಮಾನಿಸಿ 
ಹೃದಯಾಘಾತ ತರುವವನ 
ಬೆಳಗಿನಲ್ಲೊಂದು ಕತ್ತಲೆಯಲ್ಲೊಂದು 
ದು:ಖದ ಬುಗುರಿ ಆಟವಾಡಿಸುವವನ
ಜೀವಿಸಲು ಬಿಡದೆ ಸಾಯಲು ಬಿಡದೆ 
ದು:ಖಸಾಗರಕೆ ತಳ್ಳಿದ ಮೆಲ್ಲನೆ ನನ್ನ 

ಶನಿವಾರ, ಏಪ್ರಿಲ್ 23, 2011

ಇಲ್ಲದ ಉತ್ತರಕೆ ಪ್ರಶ್ನೆಗಳೆಕೆ ?ಅಮಾವಾಸ್ಯೆಯ ರಾತ್ರಿಯಲಿ 
ಬೆಳದಿಂಗಳು ಕಾಣುವುದೇ ?
ಬಳ್ಳಿಗೆ ಮೊಗ್ಗಾಗದೆ 
ಹೂವು ಬಿಡುವುದೇ ?

ಸುಂದರ ಮಳೆಯ ಹನಿಯನ್ನು 
ಬೊಗಸಿನಲ್ಲಿಡಲು ಸಾಧ್ಯವೇ ?
ಬೀಸುವ ಗಾಳಿಗೆ 
ಬೇಡವೆಂದರೆ ನಿಲ್ಲುವುದೇ?

ಸೂರ್ಯನ ಕಿರಣವನ್ನು 
ಸ್ಪರ್ಶಿಸಲು ಆಗುವುದೇ ?
ಕೇಳುವ ಪ್ರಶ್ನೆಗಳಿಗೆಲ್ಲ 
ದೇವರು ಉತ್ತರಿಸುವನೆ ?

ಕನಸೊಡೆದು ಚೂರಾದಾಗ 
ಹೃದಯ ಕಿತ್ತೆಸೆಯುವುದೇ ?
ಪ್ರಶ್ನೆಗೊಂದು ಉತ್ತರ 
ಉತ್ತರಗಳಿಗೆ ಪ್ರಶ್ನೆ ಇದೆಯೇ ?
ಭೂಮಿ ಆಗಸ 
ಎಂದಾದರೂ ಒಂದಾಗುವುದೇ ?


ಅವನು ಯಾರು ?ಅವನು ಯಾರು ?
ನಿಮ್ಮ ಮನದ ಮನೆಯಲ್ಲಿರುವವನು 

ನೆನಪಿನ ನೆಪವಾಗಿ ಬರುವವನು 
ಮಾತಿನಲಿ ಮಾನವ ಗೆದ್ದವನು 
ಸ್ಪರ್ಶದಲಿ ರಂಗೋಲಿ ಬಿಡಿಸಿದವನು 
ಪ್ರೀತಿಸಿ ಹೃದಯ ಕದ್ದವನು
ಅವನು ಯಾರು ?


ದು:ಖದಲಿ ರೆಪ್ಪೆಯಾಗಿ ನೆನೆದವನು 
ಕತ್ತಲಲಿ ಬೆಳಕಾಗಿ ಬಂದವನು 
ಚಿಂತೆಯಲಿ ನಿದ್ದೆಯಾಗಿ ಮಲಗಿಸಿದವನು 
ಭಾವನೆಗಳ ಗೋಡೆಗೆ ಬಣ್ಣವಾದವನು
ಅವನು ಯಾರು ?


ಮೌನದಲಿ ನೆನಪಾಗಿ ನಗಿಸಿದವನು 
ರಾತ್ರಿಯಲಿ ಕನಸಾಗಿ ಜೊತೆ ಬರುವವನು
ಕನಸಿನಲಿ ಪ್ರೀತಿಯ ಓಲೆ ಬರೆದವನು 
ನನ್ನುಸಿರು ನಿಂತಾಗ ನಿಟ್ಟುಸಿರು ಬಿಟ್ಟವನು 

ಅವನು ಯಾರು ?
ನಿಮ್ಮ ಮನದ ಮನೆಯಲ್ಲಿರುವವನು 

ಶುಕ್ರವಾರ, ಏಪ್ರಿಲ್ 22, 2011

ಚಂದಿರಚಂದಿರ ನಿನ್ನ ರೂಪ 
ಅಮೋಘ ಸುಂದರ 
ನಿನ್ನ ಪ್ರತಿಬಿಂಬ 
ಪ್ರೀತಿಯ ಮಂದಿರ 
ವಿಶಾಲ ಭೂಮಿಗೆ ನಿನ್ನ 
ಬೆಳಕೇ ಮಾಡುವೆ ಹಂದರ 
ಕತ್ತಲೆಗೂ ಪ್ರೀತಿ ತೋರಿಸುವ 
ಸುಂದರ ಚಂದಿರ 

ಮುಂಜಾನೆಯ ಮಳೆರಾಯ ಖುಷಿ ತಂದ

      

    ಮಳೆಹನಿಗಳು ಮೂಗಿಲೆದೆಯ ಸೀಳಿ ಮುತ್ತುಗಳಾಗಿ ಧರೆಗಿಳಿದು ಬರುವಾಗ ಭೂಮಿ ತಾಯಿಯ ಕೈ ಮಾಡಿ ಹನಿಗಳನ್ನು ಬರ ಹೇಳಿದೆ . ನಾ ಮೊದಲು ನೀ ಮೊದಲು ಹೇಳುವ ರೀತಿ ಅಪ್ಪಿಕೊಳ್ಳುವ ಆಸೆಯಲ್ಲಿ ಹನಿಗಳು ವೇಗವಾಗಿ ಭೂಮಿಗೆ ತಲುಪುತಿವೆ . ಆ ಆಸೆಯಲಿ ಚಿಟಪಟ ಶಬ್ದ ಮಾಡಿ ಹನಿಗಳು ಕೂಗುತಿವೆ . ಒಂದಲ್ಲ , ಎರಡಲ್ಲ , ಲೆಕ್ಕವಿಲ್ಲದಷ್ಟು ಹನಿಗಳು ಒಂದೇ ಮಡಿಲಿಗೆ ಸೇರಿ ನಿಸರ್ಗಕ್ಕೆ ಸಂಭ್ರಮವನ್ನುಂಟು ಮಾಡಿವೆ . ಭೇದ ಭಾವವಿಲ್ಲದೆ ಗಿಡ, ಮರ , ಬಳ್ಳಿ, ಹೂ , ನೆಲ, ಛಪ್ಪರ , ಅರಮನೆ ಎನ್ನದೆ ಎಲ್ಲರಿಗೂ ಸಮಾನವಾದ ಮಲೆಹನಿಗಳನ್ನು ಆನಂದದಿಂದ ನೀಡಿವೆ . ತಂಗಾಳಿಯು 'ಮಳೆರಾಯ ಬಂದ ಖುಷಿಯನ್ನು ತಂದ ' ಎಂದು ಸಾರುತಿದೆ . ಖುಷಿಯಾದ ಗುಡುಗು ಮಲೆರಾಜನ ಸ್ವಾಗತಿಸಲು ಆರ್ಭಟಿಸುವ ರೀತಿ ಗರ್ಜಿಸಿ ಸ್ವಾಗತ ಕೋರುತಿದೆ.
 ನೀ ಹನಿಯಾಗಿ ಹರಿದರೆ ನಾ ಹೊಳೆಯುವ ನಿನಗಾಗಿ ಎನ್ನುವ ರೀತಿ ಮಿಂಚು ಮಿರ ಮಿರನೆ ಹೊಳೆಯುತಿದೆ .
ಕಾಯುತ್ತಿರುವೆ ನಿನಗಾಗಿ ಬಾ ಬೇಗ ಮಳೆರಾಯ 
ಸುಖ ಶಾಂತಿ ನೀಡು ಬಾ ತಣ್ಣನೆಯ ಮಳೆರಾಯ 
ಎಂದು ಮನದಲ್ಲಿ ಗುನಗುನಿಸುವ ಭೂಮಿಯ ನಿನ್ನ ಸ್ಪರ್ಶದ ಸುಖಕ್ಕಾಗಿ ಕಾಯುತಿದೆ . ನೀ ಬಂದ ಕ್ಷಣದಲ್ಲಿ ಹಕ್ಕಿಗಳು ಚಿಲಿ ಪಿಳಿ ಹಾಡುತಿವೆ. ಮೊಗ್ಗು ಖುಷಿಯಿಂದ ಅರಳುತಿದೆ . ಹಸಿರಾದ ಎಲೆಗಳು ಚಿಗುರುವ ಬಯಕೆಯು ಹೊತ್ತಿವೆ .ಬಿಸಿಲಿಗೆ ಕಾದು ಬಿಸಿಯಾದ ಮಣ್ಣು ತನ್ನಲ್ಲಿ ಬಚ್ಚಿಟ್ಟುಕೊಂಡಿದ್ದ ಸುಂದರ ಮಧುರ ಸುವಾಸನೆಯನ್ನು ನಿಸರ್ಗಕೆ ಕಾಣಿಕೆಯಾಗಿ ನೀಡಿದೆ . ನಿಸರ್ಗವು ಖುಷಿಯಿಂದ ಹೊಸ ದಿನದ ಹೊಸ ಕ್ಷನಕೆ ಹೊಸದಾದ ಬಯಕೆಯ ಬೀಜವಿತ್ತು ಜೀವಾಳದ ಜೀವನಕೆ ಹೊಸ ರೂಪ ನೀಡಿ ಎಲ್ಲ ಸುಖಗಳಿಗೆ ಒಂದೇ ಬಾರಿ ಆಮಂತ್ರಣ ನೀಡಿದೆ ..


ನೀನೇಕೆ ಪ್ರೀತಿಸುವೆ ?


ಮರೆತೆನು ನಿನ್ನ ನೆನಪುಗಳ 
ಮರೆಯಲಿಲ್ಲ ನೀನು 
ಕೊಲ್ಲಿದರು ನಿನ್ನ ಹೃದಯವ 
ಪ್ರೀತಿಸುತ್ತಿರುವೆ ನೀನು 
ಅಳಿಸಿದರು ನಿನ್ನ ಕನಸುಗಳ 
ಕೊರಗಲಿಲ್ಲ ನೀನು 
ಸುಟ್ಟರು ನಿನ್ನ ಭಾವಗಳ 
ಜೋತೆಯಲ್ಲಿರುವೆ ನೀನು 
ದ್ವೇಷಿಸಿದೆ ನಿನ್ನ ಪ್ರೀತಿಯ 
ಜೀವ ತೊರೆದೆ ನೀನು 
ಕ್ಷಮೆ ಕೇಳಿದೆ ನನ್ನ ತಪ್ಪಿಗೆ 
ಮಳೆಯಾಗಿ ಕನ್ನೀರಿಟ್ಟೆ ನೀನು 


ಆಕಸ್ಮಿಕ ಮಳೆ


ತುಂತುರು ಮಳೆಹನಿಯ 
ಚಿತಪಿತ ಶಬ್ದದಲಿ 
ಮುತ್ತಿನ ರಾಶಿಯು 
ಭೂಮಿಗಿಳಿದು ಬರುತಿದೆ 
ಮೋಡಗಳು ಮಾಯವಾದ 
ಬಿಳಿ ಆಗಸದಲಿ 
ಬಣ್ಣ ಬಿಡಿಸಲೆಂಬ
ಆಸೆಯೊಂದು ಬೆಳೆದಿದೆ 
ತಂಪಾದ ಭೂಮಿಯ 
ಮಣ್ಣಿನ ವಾಸನೆಯಲಿ 
ಹುಟ್ಟಿ ಬೆಳೆದ ಗಿಡವು 
ಖುಷಿಯಾಗಿ ನಗುತಿದೆ 
ಅರಳಿದ ಹೂವಿಗೆ 
ಹನಿಯ ಸ್ಪರ್ಶವಾಗಿ 
ಪ್ರೀತಿ ಭಾವದಿಂದ 
ತಲ್ಲೀನವಾಗಿದೆ 
ನಿಸರ್ಗದ ಸುಖಕೆ 
ಮಳೆಯೊಂದು ಸಾಕ್ಷಿ 
ಮುಗಿಲಿನ ಮನದಲಿ 
ಆನಂದ ಮೂಡಿಸಿದೆ 


ಮಂಗಳವಾರ, ಏಪ್ರಿಲ್ 12, 2011

ಅಂ(ಇಂ)ದು ಹೇಗಿ(ದೆ)ತ್ತು ?

ನೀನಿಲ್ಲದ ದಿನಗಳಲ್ಲಿ ಬೇಸರವಾಗಿತ್ತು ಜೀವನ 
ನೀ ಬಂದ ಕ್ಷಣದಿ ಸುಂದರವಾಗಿದೆ ಜೀವನ 
ಕಣ್ಣಿರಿನ ಹನಿಗಳೆಲ್ಲ ಮುಗಿದ ಹೋದ ಗಾಯನ
ನೀನು ಜೊತೆಯಿದ್ದರೆ ಸುಗಮ ಸಂಗೀತದ ಗಾಯನ 
ಏಕಾಂಗಿಯಾಗಿ ಬರೆದಿದ್ದೆ ದು:ಖದ ಕವನ 
ನಿನ್ನ ಪ್ರೀತಿಯಿಂದ ನಾನಾದೆ ಪ್ರೇಮ ಕವನ 
ನೀನಿಲ್ಲದೆ ಬಾಳುವ ಆಸೆ ಎಲ್ಲಿ  ಇನಿಯ 
ಜೀವನಕೆ ಹೊಸ ಜೀವ ನೀಡಿರುವ ಇನಿಯ 
ಬಯಕೆಗಳು ಬತ್ತಿ ಬೆಂದು ಹೋದ ಸಮಯ 
ಬಂದಿರುವಾಗ ನೀನು ಖುಷಿಯಿಂದ ಹಾರುವ ಸಮಯ 
ದು:ಖದ ನೆನಪುಗಳು ಕಾಡುವುದು ಮನವ
ನಿನ್ನ ಪ್ರೀತಿಯ ಮನಸ್ಸು ಕದ್ದಿದೆ ಮನವ 
ಬೇಸರದ ಕೆಟ್ಟ ನೆನಪು ಬರದಿರಲಿ ಗೆಳೆಯ 
ಮನಸಾರೆ ಪ್ರೀತಿಸುವೆ ಜೀವಾಳದ ಗೆಳೆಯ 


ಭಾನುವಾರ, ಏಪ್ರಿಲ್ 10, 2011

ಬೇಗ ಬಾ ಇನಿಯ

ಏಕೋ ಏನೋ ತಿಳಿಯೆನು 
ಮನಸ್ಸು ನಿನ್ನ ಹುಡುಕುತಿದೆ 
ನಿನ್ನ ನೋಡುವ ಬಯಕೆಯು 
ಬೆಟ್ಟವಾಗಿ ಬೆಳೆಯುತಿದೆ 
ಎಲ್ಲಿ ಎಂದು ಹುಡುಕಲಿ ನಾನು 
ಹೀಜೆ ಗುರುತು ಕಾಣೆಯಾಗಿದೆ 
ನಿನ್ನ ನೆನಪು ಕಾಡಿ ಕಾಡಿ 
ನಯನಗಳು ಸೋತಿವೆ 
ಬೇಡವೆಂದರು ಹೃದಯ ಕೇಳದು 
ಪ್ರೀತಿ ಬೆನ್ನು ಹತ್ತಿದೆ 
ಹೆಸರು ತಿಳಿಯದೆ ಅಲೆದು ಅಲೆದು
ಮುಖ ಮುದುಡಿದ ಹೂವಾಗಿದೆ 
ಕಾಯುವೆ ನಾನು ಜನುಮವಿಡಿ 
ಬೇಗ ಬರುವೆಯಾ ಹೇಳು ನೀ ..


ಮದುಮಗಳು

ನೀರೆ ಉಡುವಳು ರೇಷ್ಮೆ ಸೀರೆ 
ಖುಷಿಯ ಗಳಿಗೆ ದಾರದ ಎಳೆಗೆ
ಅವಳ ಹಸಿರು ಗಾಜಿನ ಬಳೆಗಳು 
ಸದ್ದು ಮಾಡುವ ಮನದ ಮಾತುಗಳು 
ಹಣೆ ಮೇಲೊಂದು ಕುಂಕುಮ ಬೊಟ್ಟು 
ಮುಖದ ಸೌಂದರ್ಯಕೆ ಮೆರಗು ತರುವಳು 
ಮೂಗಿಗೊಂದು ಹೊಳೆಯುವ ಮೂಗುತಿ 
ಎಲ್ಲರ ಮನವ ಸೆರೆ ಹಿಡಿಯುವಳು 
ಕಾಲ್ಗೆಜ್ಜೆಯ ಸದ್ದು ಮಾಡಿ ನಡೆಯುತ 
ಸೂಕ್ಷ್ಮ ಸ್ಪರ್ಶದ ಸುಖವನು ಕೊಡುವಳು 
ಕೈ ಯಲ್ಲಿ ಮದರಂಗಿ ಚಿತ್ತಾರ ಮೂಡಿಸಿ 
ಮದುವೆ ಕವನದ ಅರ್ಥ ಬಿಡಿಸುವಳು 
ಬೆರಳಿಗೆ ಸುತ್ತಿದ ಬೆಳ್ಳಿ ಕಾಲುಂಗರು
ಶುಭ ಹೆಜ್ಜೆ ಇಟ್ಟು ಅಂದವಾಗಿಸುವಳು
ಜಡೆಗೆ ಮೂಡಿದ ಮಲ್ಲಿಗೆ ಹಾರ 
ಸುಂದರತೆಯ ಪರಿಮಳ ಬೀರುವಳು 
ಜೊತೆಗಾರನ ಜೋರೆಯಲಿ ಸಪ್ತಪದಿ 
ತುಳಿದು ಜೀವನ ಹೊಸದಾಗಿಸುವಳು ಶುಕ್ರವಾರ, ಏಪ್ರಿಲ್ 8, 2011

ನೆನಪಿನ ಅಲೆಗಳು ಭಾರವಾದವೇ ?


ಗರಿ ಬಿಚ್ಚಿ ಮನವು 
ಕುಣಿಯುವಾಗ 
ಸಂತಸದ ಹೊಳೆಯಲ್ಲಿ 
ಹರಿಯುವಾಗ 
ದು:ಖದ ನೆನಪಿನ 
ಮೋಡವಾಯಿತು
ಕಣ್ಣೀರಿನ ಮಳೆಯಲ್ಲಿ 
ನೆನೆಯಬೇಕಾಯಿತು 
ಬೇಡವಾದರು ಆ ದಿನ 
ಹತ್ತಿರ ಬರುತಿದೆ 
ಬೆಳಕಿಗಾಗಿ ಕಾದರು 
ಕತ್ತಲು ಹರಡುತಿದೆ 
ಚಿಂತೆಯ ಚಿತೆಯಲ್ಲಿ 
ಮನಸ್ಸು ಅಂಗಾರವಾಗಿದೆ
ಮೈ ಸುಡುವ ನೆನಪುಗಳು 
ನೋವಾಗಿ ಮರುಕಳಿಸಿತು 
ನಗುವಿನ ದಾರಿ 
ಮಾಯವಾಯಿತು 
ಸುಖಮಯ ಜೀವನ 
ಕುರುಡನ ಕಣ್ಣಾಯಿತು

ಬುಧವಾರ, ಏಪ್ರಿಲ್ 6, 2011

ಆಸೆಗೊಂದು ಕವನಕವಿಯತ್ರಿ ಆಗುವ ಆಸೆ
ಮನ ತುಂಬ ಮಹದಾಸೆ 

ಪದಗಳಿಗೆ ಪದ ಪೋಣಿಸುವಾಸೆ 
ಸ್ವರಗಳಿಗೆ ಸ್ವರ ಸೇರಿಸುವಾಸೆ 
ಪ್ರಾಸಗಳ ಮದುವೆ ಮಾಡಿಸುವಾಸೆ
ಕವನ ಕಟ್ಟುವ ಮಹದಾಸೆ
ನನಗೆ ಕವಿಯತ್ರಿ ಆಗುವ ಆಸೆ

ಕನಸೆಲ್ಲ ನನಸಾಗಿಸುವಾಸೆ 
ದಿನದಲ್ಲಿ ಚಂದ್ರನ ತೋರಿಸುವಾಸೆ 
ಕಲ್ಪನೆಯ ಕಡಲಲ್ಲಿ ತೇಲಾಡುವಾಸೆ
ಕವನ ಕಟ್ಟುವ ಮಹದಾಸೆ
ನನಗೆ ಕವಿಯತ್ರಿ ಆಗುವ ಆಸೆ

ಬುವಿಯ ರೂಪ ವರ್ಣಿಸುವಾಸೆ
ಮೋಡದಲ್ಲಿ ಮನೆ ಕಟ್ಟುವಾಸೆ
ಸೂರ್ಯ ಚಂದ್ರರಲ್ಲಿ ಪ್ರೀತಿ ಹುಟ್ಟಿಸುವಾಸೆ
ಕವನ ಕಟ್ಟುವ ಮಹದಾಸೆ
ನನಗೆ ಕವಿಯತ್ರಿ ಆಗುವ ಆಸೆ

ನಯನಗಳ ಮಾತಿನಲಿ ಸ್ವರ್ಗ ತೋರಿಸುವಾಸೆ 
ಮೌನವಾದ  ಬಂಡೆಯಲ್ಲಿ ಶಬ್ದ ಹೊರಡಿಸುವಾಸೆ 
ಕುರುಡನಿಗೆ ಬಣ್ಣವ ಗುರುತಿಸುವಾಸೆ 
ಕವನ ಕಟ್ಟುವ ಮಹದಾಸೆ
ನನಗೆ ಕವಿಯತ್ರಿ ಆಗುವ ಆಸೆ