ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಡಿಸೆಂಬರ್ 15, 2012

ಮಗನೆಂಬ ನಗ


ಅಮ್ಮ ಎಂದು ಕರೆಯುವರಿಲ್ಲ
ಅಪ್ಪನೆಂದು ಪ್ರೀತಿಸುವರಿಲ್ಲ 
ಮಮತೆಯ ಭಾವದ ಅರಿವಿಲ್ಲ
ಸಂಬಂಧ ಮೌಲ್ಯದ ಬೆಲೆಯಿಲ್ಲ
ಆದರೂ ಬೇಕು ಗಂಡು ಮಗ 
ಅಜ್ಞಾನಿಗಳಿಗೆ ಇವನ ಬೆಲೆಯೇ ನಗ 
ಅಕ್ಕರೆ ಮಾತು ಆಡುವುದಿಲ್ಲ 
ನಕ್ಕರೆ ನಗಲು ಬಿಡುವುದಿಲ್ಲ
ಸಂತೆಯಲಿ ಮಾನವನ್ನು ಮಾರುವರೆಲ್ಲ 
ಹಿರಿಯರನ್ನು ಹೊಡೆಯುವರಲ್ಲ
ಆದರೂ ಬೇಕು ಗಂಡು ಮಗ 
ಅಜ್ಞಾನಿಗಳಿಗೆ ಇವನ ಬೆಲೆಯೇ ನಗ 
ದೀಪ ಬೆಳಗಿಸಲೆಂದು ಹುಟ್ಟಿದವರಲ್ಲ 
ಕೀರ್ತಿ ಹಬ್ಬಲೆಂದು ದುಡಿದವರಲ್ಲ 
ಅಮ್ಮ-ಅಪ್ಪನಿಗೆ ಶತ್ರು ಅನ್ನುವರಲ್ಲ 
ತುತ್ತು ನೀಡಿದ ತಾಯಿಯ ಕತ್ತು ಕೊಯ್ಯುವರಲ್ಲ 
ಆದರೂ ಬೇಕು ಗಂಡು ಮಗ 
ಕೆಲವರಿಗೆ ಮಗನೇ ಬಂಗಾರದ ನಗ 
ಹಾಲುನಿಸಿದ ತಾಯಿಯ ಸ್ಮರಿಸುವರಿಲ್ಲ
ಕೈ ಹಿಡಿದು ನಡಿಸಿದ ಅಪ್ಪನ ಅರಿವಿಲ್ಲ
ಕೆಟ್ಟವರ ಜೊತೆ ಸೇರಿ ಕೆಡುವರೆಲ್ಲ
ವೃದ್ಧಾಶ್ರಮದ ದಾರಿ ಹೆತ್ತವರಿಗೆ ತೋರಿಸುವರಲ್ಲ 
ಆದರೂ ಬೇಕು ಗಂಡು ಮಗ 
ಗಂಡು ಮಗನೆಂದರೆ ಚಿನ್ನದ ಮಗ 
ಮಡದಿಯ ಮದ್ದಿಗೆ ನಶೆಯಾಗುವರಲ್ಲ
ಹೆತ್ತವರ ಕಳ್ಳಿಗೆ ಬೆಂಕಿ ಇಡುವರಲ್ಲ 
ಹಿರಿಯರ ಸೇವೆ ತಿಳಿದಿಲ್ಲ 
ಸ್ವಾರ್ಥದಲಿ ಹೆತ್ತವರನು ಸಂಹರಿಸುವರಲ್ಲ
ಆದರೂ ಬೇಕು ಗಂಡು ಮಗ 
ಮನೆ ಬೆಳಗಿಸಲು ಗಂಡು ಮಗ 
ಮರೆಯದಿರಿ ದೀಪ ಹಚ್ಚುವಳು ಹೆಣ್ಣು 
ಬೆಳಕು ನೀಡುವಳು ಹೆಣ್ಣು 
ಆ ಬೆಳಕಿನಲಿ ಮಿಂಚುವನು ಮಾತ್ರ ಗಂಡು 
ಈ ಕುರುಡ ಲೋಕಕೆ ಕಾಣುವುದು 
ದೀಪವೆಂಬ ಉರಿಯುವ ಹೆಣ್ಣಲ್ಲ 
ಮಿಂಚಾಗಿ ಮಾಯವಾಗುವ ಗಂಡುಮೃಗವೆಂಬ " ಮಗ "