ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಜನವರಿ 25, 2012

ಭಾರತಾಂಬೆಬರೆಯಬೇಕೆಂದೆ ನಾನೊಂದು ಕವನ ಮುಂಜಾನೆಯಲಿ
ಭಾವದ ಕುಸುಮ ಅರಳಿದ ದಿನವಾಗಲಿ
ಭಾರತಾಂಬೆಯ ಮಡಿಲಿಗೆ ಮತ್ತೆ ಮಹಾತ್ಮರು ಹುಟ್ಟಿ ಬರಲಿ
ನಾನು ನನ್ನ ಸ್ವಾರ್ಥ ತೊಲಗಿ ನಾವು ಎಂಬುದಾಗಲಿ
ಜಾತಿ ಭೇದ ಬೇಡ ನಮಗೆ ನಾವೆಲ್ಲರೂ ಒಂದಾಗಲಿ
ಸಂಸ್ಕ್ರತಿ ಸಂಗಾತಿಯ ಜೊತೆಯೆಂದೂ ಮರೆಯದಿರಲಿ
ದೇಶಕ್ಕಾಗಿ ಮಡಿದ ಸೇವಕರಿಗೆ ಮನದಲ್ಲಿ ಗೌರವವಿರಲಿ
ಮಹಾತ್ಮರಿದ್ದರೆಂದು ಸ್ವಾತಂತ್ರ್ಯ ನಮ್ಮದಾಗಿದೆ ನೆನಪಿರಲಿ
ದೇಶ ಭಕ್ತಿ ಎಂದೆಂದಿಗೂ ಕುಂದದಿರಲಿ
ರಾಮರಾಜ್ಯದ ಕನಸು ನನಸಾಗಿಸುವ ಗುರಿಯಾಗಿರಲಿ
ನಮ್ಮ ಜನನಿ ಭಾರತಾಂಬೆಯು ಶಿಖರದ ಎತ್ತರಕೆ ಹಾರಲಿ
ಅವಳ ಕೀರ್ತಿ ಶಿಖರದ ಕಿರೀಟವಾಗಲಿ

ಎಲ್ಲರಿಗೂ ಗಣರಾಜ್ಯೋತ್ಸವ ಶುಭಾಷಯಗಳು

ಮಂಗಳವಾರ, ಜನವರಿ 24, 2012

ಮರೆಯಲಾರೆ

ಮರೆಯಲಾರೆನು ಮರೆಯದನ್ನ
ಮರೆ ಮರೆ ಎಂದರೆ ಮರಣ ಹೊಂದೆನು
ಮನದಿ ಮೂಡಿದೆ ಮೌನವೇದನೆ
ಮರೆಯನೆಂದರೆ ಮರೆವೆನು
ಮನಸ್ಸಿನಾಳದಿ ಪ್ರೀತಿ ಪ್ರೇಮ
ಮನೆ ಕಟ್ಟಿದೆ ನಾ ಹೇಗೆ ಮುರಿಯೆನು
ಮಂಗಲದಿ ಮಾಂಗಲ್ಯವಾಗಿದೆ
ಮಾಂಗಲ್ಯವ ಹೇಗೆ ಮರೆಯೆನು
ಮರವಾಗಿ ಬೆಳೆದ ಬಂಧನಕೆ
ಮರಣದಂಡನೆ ನೀಡಲಾರೆನು
ಮರೆಯಲಾರದ ಮೌಲ್ಯವನ್ನು
ಮರೆಯೆಂದರೆ ನಾ ಮರೆಯಲಾರೆನು 

ಭಾನುವಾರ, ಜನವರಿ 22, 2012

ಹೈಸ್ಕೂಲ ಹುಡುಗನ ಲಾಲಿ ಹಾಡು
ಜೋ ಜೋ ಜೋ ಜೋ ಜೋ ಜೋ
ರಾತ್ರಿ ಹೊತ್ತ ಆಗೇತಿ
ಕಣ್ಣು ಮುಚ್ಚು ನನ್ನ ಮಗನ
ಕನಸಾಗ ಐಶ್ವರ್ಯ ಬರತಾಳ
ಕಣ್ಣು ಹೊಡೆದು ನಿನ್ನ ಮಲಗಸ್ತಾಳ
ಜೋ ಜೋ ಜೋ ಜೋ ಜೋ ಜೋ

ಸಚಿನ ತೆಂಡುಲ್ಕರ್
ಕ್ರಿಕೆಟ್ ಕಲಸ್ತಾನ
ಕ್ಯಾಪ್ಟನ್ ಧೋನಿ ಹೇರಸ್ಟೈಲ್
ಮಾಡೋದು ಹೇಳ್ತಾನ
ಪಿ.ಟಿ.ಉಷಾ ಓಡಿ ಪೆಟ್ರೋಲ
ಉಳಿಸೋದು ಹೇಳ್ತಾಳ
ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಶ್ರೀ ರಾಜಕುಮಾರರು
ಗಂಧದ ಗುಡಿ ತೋರಿಸ್ತಾರ
ಸಾಹಸಸಿಂಹ ಕರುನಾಡ
ಹೆಮ್ಮೆಯ ಹೊಗಳ್ತಾರ
ರೈತನ ಮಗಳೆಂದು ಪೂಜಾ ಗಾಂಧಿ
ಪೋಜು ನೀಡ್ತಾಳ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಕುವೆಂಪು ಬೇಂದ್ರೆ
ಕವಿತೆಯ ಬರಿತಾರ
ಸಿ ಅಶ್ವಥ್ ಸೋನು
ರಾಗದಿ ಹಾಡವ ಹಾಡ್ತಾರ
ಉಮಾಶ್ರೀ ಹು ಹು ಅಂತಾ
ಬಿದ್ದ ಬಿದ್ದ ನಗಿಸ್ತಾಳ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಸಲಮಾನ ಖಾನ ಬಂದು
ಎಕ್ಟಿಂಗ್ ಕಲಿಸ್ತಾನ
ಹೃತ್ವಿಕ್ ರೋಶನ ನಿನಗ
ಕುಣಿಯೋದ ತೋರಿಸ್ತಾನ
ಶೀಲಾ ಕಿ ಜವಾನಿ
ಕೈತ್ರಿನಾ ಮಾಡತಾಳ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಸಿದ್ಧರಾಮಯ್ಯನು ಕೈ
ತೋರಿಸಿ ಕರಿತಾನ
ಕುಮಾರಸ್ವಾಮಿ ರಾಧಿಕಾ
ಜೊತೆ ಬರತಾನ
ಶೋಭಾ ಕರಂದ್ಲಾಜೆ ಯಡ್ಡಿ
ಗೆಳೆತನ ಹೊಗಳ್ತಾರ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ಶ್ರೀ ಹೀರೆಮಗಳೂರು ಕಣ್ಣನ್
ಉದಯಾಲಿ ಹರಟೆ ಹೊಡಿತಾರ
ಗಂಗಾವತಿ ಪ್ರಾಣೇಶ
ಖಿಲ ಖಿಲನೆ ನಗಿಸ್ತಾನ
ಇಂದುಮತಿ ಹಾಡಿದರ
ಕೃಷ್ಣನ ನಂದಿನಿ ಕುಣಿತಾಳ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ

ನಿವ್ಜ ರಿಪೋರ್ಟರ್ಸ
ಪ್ರಶ್ನೆಗಳ ಮಳೆ ಸುರಿಸ್ತಾರ
ಸ್ಟಾರ ಪ್ಲಸ್ ನವರು
ಹೆಂಗಸರಿಗೆ ಸೀರಿಯಲ್ ತೋರಿಸ್ತಾರ
ಎಫ್ ಟಿವಿ ನೋಡುವರು
ಜೊಲ್ಲವ ಸುರಿಸ್ತಾರ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋತಡ ಮಾಡಿ ಎದ್ದರ
ಶಾಲೆಗ(ಅ)ಪ್ಪ ಬಿಡಾಕ ಬರ್ತಾನ
ಮಿಸ್ಸ ಮಿಸ್ಸ ಅನ್ನುತ್ತ
ಕನಸಲಿ ಪಾಠ ಕೇಳ್ತಾನ
ಬೇಗ ಏಳು ಇಲ್ಲಂದ್ರ
ಹೊಡಿತೀನಿ ನನ್ನ ಮಗನ

ಬೇಗ ಮಲಗು ಬೇಗ ಏಳುವಾ ಅಂತ
ಜೋ ಜೋ ಜೋ ಜೋ ಜೋ ಜೋ
ಶುಕ್ರವಾರ, ಜನವರಿ 20, 2012

ಆಸೆಮತ್ತೊಮ್ಮೆ ನನ್ನ ನೆನಪುಗಳು
ನಿಜ ವಸ್ತುಗಳಾಗುವ ಆಸೆ 
ಚಿಕ್ಕವರಿದ್ದಾಗ ಆಡಿದ 
ಉಸುಕಿನಲಿ ಗೂಡು ಕಟ್ಟುವ ಆಸೆ 
ಬಣ್ಣ ಬಣ್ಣದ ಚಿಟ್ಟೆಯಾಗಿ 
ಫ್ರಾಕ್ಕು ತೊಟ್ಟು ಓಡುವ  ಆಸೆ 
ನನ್ನ ಗೆಳತಿ ಸವಿಯ 
ಗಲ್ಲವ ಚಿವುಟಿ ನಗುವ  ಆಸೆ 
ಊಟಕ್ಕೆಂದು ಕೈ ತೊಳೆದರೆ 
ಅಮ್ಮನ ಸೆರಗಿಗೆ ಒರೆಸುವ ಆಸೆ 
ಸಂಬಂಧಿಕರ ಮನೆಗೆ ಹೋದರೂ
ಅಪ್ಪನ ತೊಡೆ ಮೇಲೆ ಕೂಡುವ  ಆಸೆ 
ಕದ್ದು ಮುಚ್ಚಿ ನಾ ಮೊದಲೂ ಬಡಿದರೂ 
ಅಣ್ಣ ಬಡಿದನೆಂದು ಸುಮ್ಮನೆ ಅಳುವ ಆಸೆ 
ಕುಡಿಯದ ಹಾಲಿಗೆ ಬೈಯ್ಯುವರೆಂದು 
ಸುಮ್ಮನೆ ಕಣ್ಣ್ಮುಚ್ಚಿ ಮಲಗುವ ಆಸೆ 
ಗಿಡ್ಡಿ ಗಿಡ್ಡಿ ಅನ್ನುವರೆಂದು 
ಹಗ್ಗವ ಆಡಿ ಸೈಕಲ್ ತುಳಿದು ಉದ್ದಾಗುವ ಆಸೆ 
ಕನ್ನಡಿ ಮುಂದೆ ಸುಮ್ಮನೆ ನಕ್ಕು 
ಚೆಂದ ಇದ್ದೀಯಾ ಎಂದು ಹೊಗಳುವ ಆಸೆ 
ಎಲ್ಲರೂ ಹೇಳಿದ ಔಷದ ಬಳಸಿ 
ಪದೇ ಪದೇ ಕೂದಲನು ಜಗ್ಗಿ ನೋಡುವಾಸೆ 
ಕನಸಲಿ ಕಂದ ಅರಮನೆಯ 
ರಾಜಕುಮಾರಿ ನಾನೆಂದು ನೆನೆಸಿ ನಗುವ ಆಸೆ 
ಮುದುಡಿ ಮಲಗುವ ನನ್ನ ಚಟಕೆ 
ಅಮ್ಮನಿಂದ ಬಯಿಸಿಕೊಳ್ಳುವಾಸೆ
ಗೊರಕೆ ಹೊಡೆಯುವ ಅಪ್ಪನ ಹೊಟ್ಟೆಗೆ 
ಗಣಪತಿ ಗಣಪತಿ ಅನ್ನುವ ಆಸೆ 
ಬೈಯ್ಯುವ ಅಮ್ಮನಿಗೆ ಅಪ್ಪನಿಂದ ಹೆದರಿಸಿ 
ಜಾಣಳೆಂದು ಹೊಗಳಿಕೊಳ್ಳುವ ಆಸೆ 
ಗೆಳತಿಯರೊಡನೆ ಗುಳ್ಳವನ ತಂದು 
ಚಿಕಮಿರಿ ಚೆನ್ನಕ್ಕನ ಹಾಡಾಡುವ ಆಸೆ 
ಒಂದೋ ಎರಡೋ ನನ್ನ ಆಸೆ 
ಆಸೆಗಳನ್ನು ಬದಿಯಿಟ್ಟು ನೋಡಬೇಕಿದೆ 
ಜೀವನದಲಿ  ಕಳೆದು ಹೋದ ಕ್ಷಣಗಳ 
ಆಸೆ ಮನಕೆ ಹುಟ್ಟುತ್ತಿದೆ..
ಬನ್ನಿ ಆಶಿಸೋಣ ಎಲ್ಲರ ಆಸೆಗಳು 
ನಿರಾಶೆಯಾಗದಿರಲಿ 
ಅವರವರ ಆಶೆಗಳು ಅವರಿಗೆ ದೊರೆಯಲಿ ... 

ನಮ್ಮ ರೈತಬಿಸಿಲೆನ್ನದೆ ಮಳೆಯೆನ್ನದೆ 
ಹಸಿವ ತಡೆದು ಬದುಕುವರು 
ಆಯಾಸವೆಂದು  ಬೆವರು ಸುರಿಸಿ
ಬೇಸಗಿಯಲಿ ಕಣ್ಣೀರು ಹರಿಸಿ 
ಊಳುವ ನೆಲ ಕಂಡಾಗ ಹಸಿರು 
ರೈತನ ದೇಹದಲಿ ಕೇಳಿತ್ತು ಉಸಿರು 
ಹರಕು ಬಟ್ಟೆ ಮುರುಕು ಮನೆ 
ಊಟದಲ್ಲಿ ಮೊಸರು ಕೆನೆ 
ಸಾಲ ಒಂದೆ ಇವರ ಚಿಂತೆ 
ಆದ್ರೂ ಮಲಗು ಪರಿ ನೋಡಲಾಗದು ಅಂತೆ 
ದಣಿದು ದುಡಿದು ಗಳಿಸುವರು ಹಣ 
ಸುಖಿಯೆಂದರೆ ರೈತ ಜನರ ಮನ 
ಹೃದಯಾ ತುಂಬ ಪ್ರೀತಿಯ ಶ್ರೀಮಂತ 
ನಲಿಯುವರು ಬಂದರೆ ಋತು ವಸಂತ 
ಹಾಸಿಗೆಯಷ್ಟು ಕಾಲು ಚಾಚು 
ಇಲ್ಲಾದರೆ ಬೋಳು ತಲೆ ಬಾಚು 
ಜಾಣರಿವರು ಪ್ರಾಣಿ ಸ್ನೇಹಿಗಳು 
ಭಾರತದ ಹೆಮ್ಮೆಯ ಒಕ್ಕಲಿಗರು 


ಬಹುಶ:


ನೀರ್ಜಿವಿ ಆಗಬೇಕಿತ್ತು
ನಾನು ನೀರ್ಜಿವಿ

ಸಹನೆ ಶಾಂತಿ ತಿಳಿಯಬೇಕಿಲ್ಲ
ದ್ವೇಷದ ಕಿಚ್ಚಿಗೆ ಹೆದರಬೇಕಿಲ್ಲ
ಪ್ರೀತಿಯ ಜಾಲಕೆ ಸಿಲುಕಬೇಕಿಲ್ಲ
ಭಾವನೆಗಳ ಸಾಗರದಿ ಮುಳುಗಬೇಕಿಲ್ಲ..
ದು:ಖವೆಂದು ನೋದಬೇಕಿಲ್ಲ
ಸಂಬಂಧ ಸಂತೆಯಲಿ ಕಳೆಯಬೇಕಿಲ್ಲ
ಹಣ ಹಣವೆಂದು ಕೊರಗಬೇಕಿಲ್ಲ
ಅಹಂಕಾರದ ಜ್ವಾಲೆಯಲಿ ಉರಿಯಬೇಕಿಲ್ಲ..
ಮನಸ್ಸನು ಬೆಣ್ಣೆಯಾಗಿಸಿ ಕರಗಬೇಕಿಲ್ಲ
ಚಿಂತೆಯಲಿ ಚಿತೆಯಾಗಬೇಕಿಲ್ಲ
ಕಷ್ಟ ಬಂದರೆ ಕಣ್ಣೀರು ಹಾಕಬೇಕಿಲ್ಲ
ಕೆಟ್ಟ ಕ್ಷಣ ನೆನಸಲು ತಲೆಬೇಕಿಲ್ಲ..
ಸ್ವಾರ್ಥಿ ಜಗತ್ತಿನಲಿ ತ್ಯಾಗಿಸಬೇಕಿಲ್ಲ
ಹಡೆದವ್ವಗೆ ನೋವಿಸಿ ಹುಟ್ಟಬೇಕಿಲ್ಲ
ಾಯುಷ್ಯ ಮುಗಿಯಿತೆಂದು ಸಾಯಬೇಕಿಲ್ಲ
ಸತ್ತವರ ನೆನೆಯುತ ಮರೆಯಬೇಕಿಲ್ಲ

ನೀರ್ಜಿವಿ ಆಗಬೇಕಿತ್ತು
ನಾನು ನೀರ್ಜಿವಿ


ಮೌನವೇದನೆ


ಮನಸ್ಸೆ ಓ ಮನಸ್ಸೆ
ನಿನ್ನಲ್ಲೇಕೆ ಮೌನ ??
ಮಾತನಾಡು ನೀನು 
ಮುದ್ದಾಡಿ ಮಲ್ಲಿಗೆಯಾಗು
ಮುದುಡದಿರು ಮನಸ್ಸೆ
ಮಧುವನದ ಹೂ ಆಗಿರು
ಮೌನ ಒಪ್ಪದು
ಮನಸ್ಸು ಹಗುರಾಗದು
ನೀ ನಕ್ಕಾಗ ತಾನೆ
ಭೂಮಿ ಸುಂದರ ಕಾಣುವುದು
ಮೌನ ಬಿಡು ಮಾತನಾಡು
ವೇದನೆ ಮರೆತುಬಿಡು
ಮೌನದ ಮೋಡವಾಗದಿರು 
ಸಂತಸದ ಬೆಳಕಾಗು
ಮನಸ್ಸೆ ಓ ಮನಸ್ಸೆ
ನಿನ್ನಲ್ಲೇಕೆ ಮೌನ ?
ಮೌನವೇದನೆ ಕಿತ್ತೆಸೆದು 
ನನ್ನ ಅರಗಿಣಿಯಾಗಿರು

ಬುಧವಾರ, ಜನವರಿ 18, 2012

ಎಲ್ಲಿರುವೆ??ಕಾಯುವೆ ನಿನಗಾಗಿ
ಗಡಿಯಾರದ ಮುಳ್ಳಾಗಿ
ಚಂದ್ರಮನ ಜೊತೆಗೆ
ಬೆಳಂದಿಗಳ ಬೆಳಕಾಗಿ
ನೀ ಬರುವ ವೇಳೆಯಲಿ
ರಂಗೋಲಿಯ ಬಣ್ಣವಾಗಿ
ಸ್ವಾಗತಿಸುವೆ ನಿನ್ನ
ಇಂಪಾದ ಕೋಗಿಲೆಯಾಗಿ
ಅಲಂಕರಿಸುವೆ ನನ್ನ
ಶಿಲ್ಪಿಯ ಶಿಲೆಯಾಗಿ
ಮುಖ ತುಂಬ ನಗುವು
ಅರಳಿದ ತಾವರೆಯಾಗಿ
ಕೊರಳಿಗೆ ಕೋಮಲ
ಮುತ್ತಿನ ಹಾರ ಧರಿಸಿ
ಭಾವನೆಗಳ ಮನದಿ
ನವಿರಾದ ನವಿಲ ನಲಿಸಿ
ಹೃದಯ ತುಂಬ 
ಪ್ರೇಮದ ವೀಣೆ ಬಾರಿಸಿ
ಪ್ರೀತಿಸುವೆ ಜೀವದ
ಎದೆಬಡಿತವಾಗಿ
ಎಲ್ಲಿರುವೆ ? ಇನಿಯ..!
ನಿನ್ನ ಕಾಯುತ 
ಗಡಿಯಾರದ ಮುಳ್ಳು ಮುರಿದಿವೆ
ಬೆಳಂದಿಗಳು ದೂರಾಗಿ
ಅಮವಾಸ್ಯೆ ಬಂದಿದೆ
ಮನಸ್ಸು ಕೇಳದು 
ಪ್ರೀತಿ ಬಿಡದು
ಕಾಯುವೆ ನಿನ್ನ.. ಮುಂಬರುವ
ಹುಣ್ಣಿಮೆ ರಾತ್ರಿಗಾಗಿ

ಮಂಗಳವಾರ, ಜನವರಿ 17, 2012

-ನ್ಯಾಯದಿಂದ ಅನ್ಯಾಯ -

ನ್ಯಾಯ ನೀಡುವರೆ
ಅನ್ಯಾಯ ಎಸೆದಾಗ
ನ್ಯಾಯಕ್ಕೇನು ಬೆಲೆ ?
ವಕೀಲರಿಗಿದೆಯೇ ತಲೆ ?
ಚಿಕ್ಕ ತಪ್ಪು ನಡೆದರೂ
ದೊಡ್ಡ ಬೆಟ್ಟ ತೋರಿಸಿದಾಗ
ಎಲ್ಲಿರುವುದು ಕ್ಷಮೆ?
ಸಾರ್ವಜನಿಕರಲ್ಲೇಕೆ ತಾಳ್ಮೆ ?
ದಿನವಿಡಿ ನಡೆಸಿದ ರಸ್ತೆತಡೆ
ಜನರಿಗೆ  ಶಿಕ್ಷೆ  ಬಿರುಬಿಸಿಲನೆಡೆ
ಕಳೆದು ಹೋಗಿತ್ತಾ ನ್ಯಾಯ ಬುದ್ಧಿ ?
ಸಾರ್ವಜನಿಕರೆ ಇವರ ಅಹಂಕಾರವ ಗುದ್ದಿ / ಒದ್ದಿ
ಶಿಕ್ಷೆ ಪಡೆದ ನಾಗರಿಕರೆ
ಏಳಿ ಎದ್ದೇಳಿ..
ಅನ್ಯಾಯ ಎಸೆದಾಗ
ನ್ಯಾಯವೆಲ್ಲಿದೆ ಎಂಬ ಪ್ರಶ್ನೆ ಕೂಗಿ ಕೂಗಿ ಕೇಳಿ
ಸಿಗದಿ ನಿಮಗೆ ಉತ್ತರ 
ಕಾರಣ ಅಧಿಕಾರದ ಒತ್ತಡ
ಮನೆ ಮಾಡಿದೆ ಧೈರ್ಯವಿಲ್ಲದ ಹೆದರಿಕೆ
ಭೃಷ್ಟಾಚಾರ್ಯಕ್ಕಿಲ್ಲ ನಿಮ್ಮಗಳ ಬೆದರಿಕೆ
ಬಣ್ಣಿ ಹೋರಾಡೋಣ..
ನ್ಯಾಯದ ಬಾಗಿಲು ತೆರೆಯೋಣ..
ಅನ್ಯಾಯವ ಸುಟ್ಟು ಹಾಕೋಣ


ನನ್ನ ಕೂಗು ರಸ್ತೆಯಲಿ ನಿಂತು ಕಾದವರಿಗಾಗಿ
ರೋಗಿಗಳು ಅನುಭವಿಸಿದ ನೋವಿಗಾಗಿ
ವಿದ್ಯಾರ್ಥಿಗಳು ಕಲಿಯದ ಅಭ್ಯಾಸಕ್ಕಾಗಿ
ನೌಕರರು ಪಡೆಯದ ಒಂದು ದಿನದ ಸಂಬಳಕ್ಕಾಗಿ
ಪ್ರಯಾಣಿಕರು ಪಡೆದ ನಷ್ಟ ಟಿಕೆಟ್ಟು ಖರ್ಚಿಗಾಗಿ
ಒಟ್ಟಿನಲ್ಲಿ ನಾಗರಿಕರಿಗೆ ನ್ಯಾಯ ದೊರೆಯಲಿಲ್ಲೆಂಬುದಕ್ಕಾಗಿ ಗೆಳೆಯ/ಗೆಳತಿಯರೆ ನನ್ನಿ ಕವನ..

ಸೋಮವಾರ, ಜನವರಿ 16, 2012

-ಹಳ್ಳಿಯ ಸೊಗಸು-
ಕೋಳಿ ಕೂಗಿನಿಂದ ಶುರುವಾಗುವ ಬೆಳಕು
ಸೂರ್ಯೋದಯ ಮೊದಲೇ ಓಡಿಸುವವರು ಕೊಳಕು
ರಂಗವಲ್ಲಿ ಬಿಡಿಸಿದರೆ ಮನೆ ಥಳಕು ಬಳಕು

ರೊಟ್ಟಿ ಪಲ್ಲೆ ಮೊಸರು ಮುಂಜಾನೆ ತಿಂಡಿ
ಕುಡಿಯುವರು ಹಸಿಹಾಲು ಎರಡೆರಡು ಗಿಂಡಿ
ಥಟ್ಟನೆ ಬಡಿಯುವರು ಸಗಣಿಯ ಉಂಡೆ

ಎಳೆ ಬಿಸಿಲ ಜೊತೆಗೆ ಗದ್ದೆಗೆ ಪಯಣ
ಭೂಮಿ ತಾಯಿ ಮಡಿಲಲಿ ಈ ರೈತರ ಜನನ
ಪೂಜಿಸುವ ದೇವರೇ ವರುಣ

ಖುಷಿಯ ಸಂಭ್ರಮವೇ ಇವರ ಸುಗ್ಗಿ
ಊಟದಲಿ ಸಿಹಿಯಾದ ಹೋಳಿಗೆ ಹುಗ್ಗಿ
ಹಿರಿಯರಿದ್ದರೆ ನಡೆವರು ತಗ್ಗಿ ಬಗ್ಗಿ

ಮನೆಕೆಲಸದ ಜೊತೆಗೆ ಆಟ ಪಾಠ
ಶ್ರೀಮಂತ ಹೃದಯಕೆ ತಿಳಿದಿಲ್ಲ ಜೂಜಾಟ
ಇವರಿಗಿಲ್ಲ ನಿದ್ರಾಹೀನತೆಯ ಕಾಟ

ಹಣದ ಮೋಹವಿಲ್ಲದ ನೆಮ್ಮದಿ ಜೀವನ
ಪ್ರೀತಿ ಸಂಬಂಧ ಬಾಳಿಗೆ ಸಾಧನ
ಹಳ್ಳಿ ಜೀವಿಗಳ ಬದುಕು ಪಾವನ

ಗುರು ಹಿರಿಯರಿಗೆ ಗೌವರದ ನಮಸ್ಕಾರ
ಮಕ್ಕಳಲಿ ಬೆಳೆಸುವರು ಒಳ್ಳೆಯ ಸಂಸ್ಕಾರ
ಕಷ್ಟದಲೂ ನಗುತ ಜೀವನ ಸಾಗಿಸುವುದೆ ಹಳ್ಳಿಯ ಚಮತ್ಕಾರ

ಪ್ಯಾಟೆ ಲೈಫು..


ಹೊಟ್ಟೆಗಿಲ್ಲ ವೇಳೆ
ಸುರಿಯುವುದು ಚಿಂತೆಗಳ ಮಳೆ
ಮುಖದ ಮೇಲಿಲ್ಲ ಮಮತೆಯ ಕಳೆ
ಮಾಲಿನ್ಯದಿಂದ ನಶಿಸಿದೆ ಹಳ್ಳಿಯ ಬೆಳೆ

ಸಂಬಂಧಗಳಲ್ಲೂ ನೋಡುವರು ವಾಸ್ತು
ಚಿಕ್ಕ ಚಿಂದಿ ಬಟ್ಟೆಗಳೆ ಶಿಸ್ತು
ಹಣವೇ ಪ್ರೀತಿಯ ವಸ್ತು
ವಾರಕ್ಕೊಂದು ಪಾರ್ಟಿ ನೈಟ್ ಮಸ್ತು

ದಾರಿಯಲೆ ಸಿಲುಕಿದೆ ಮನಸ್ಸಿನ ಟ್ರಾಫಿಕ್ಕು
ಪೋಜು ನೀಡೊ ಕೆಲಸ ಓದುವುದು ಮ್ಯಾಟ್ರಿಕ್ಕು
ಸರ್ಕಾರ ಸಹಾಯಕೆ ನಗರವೇ ಹ್ಯಾಟ್ರಿಕ್ಕು
ಕೆಟ್ಟ ಚಟ ನೀಡುವುದು ಯಮನ ಟಿಕೆಟ್ಟು

ಬಿಂದಾಸ್ ಆಗಿರೊದೆ ಕೆಲವರ ಲೈಫು
ಮದುವೆ ಮೊದಲೇ ಆಗುವರು ವೈಫು
ಜೇಬಿನಲ್ಲಿದೆ ಅಹಂಕಾರದ ನೈಫು
ಹೀಗಿದೆ ನೋಡಿ ಕೆಲವರ ಪ್ಯಾಟೆ ಲೈಫು

( ಎಲ್ಲ ಪ್ಯಾಟೆಯವು ಹೀಗಿರುವುದಿಲ್ಲ.. ಕೆಲವರು ಮಾತ್ರ)

ಕವನಕವನವೆಂದರೆ
ಕವನದಲ್ಲಿರುವ ಅವಳು
ಪದಗಳನ್ನು ಕೂದಲೆಳೆಯೆಂದು
ತಿಳಿದು ಬೆಳೆಸಿದವಳು
ಪ್ರಾಸಗಳೆಂಬ ನಯನಗಳಿಂದ
ಸೆಳೆಯುವವಳು
ಭಾವನೆಗಳ ಜೊತೆ ಬೆರೆತವಳು
ಕಲ್ಪನೆಯನು ಕವನವೆಂದು ಬರೆದವಳು
ಹೃದಯದ ಪುಟವ ಕೆಲ ಶಬ್ದಗಳಲಿ
ಅಲಂಕರಿಸುವವಳು
ಪದಗಳ ಕೈ ಬೆರಳಿನಿಂದ ಓದುಗರನ್ನು
ಕರೆತರುವಳು
ಎದೆ ಬಡಿತ ಹೆಚ್ಚಾಗಲು ಪ್ರೀತಿ ಅರ್ಥದ
ಮುತ್ತೊಂದು ಕೊಡುವಳು
ಕವನದ ಹೆಸರು ಬರೆಯಬೇಕಿಲ್ಲ ಇವಳಿಗೆ
ಕಾರಣ ಕವನದಲ್ಲಿರುವವಳೇ ಇವಳು

ಗುರುವಾರ, ಜನವರಿ 12, 2012

ಮನಸ್ಸು..

 
   ಕಳೆದು ಹೋಗಿವೆ ಆ ದಿನಗಳು
ನೆನಪುಗಳು ಕಲೆಯಾಗಿ ಮೂಡಿವೆ
   ಗೆಳೆಯ ನಿನ್ನ ಮಾತುಗಳು
ಶಬ್ದಕೋಶವಾಗಿ ಉಳಿದಿವೆ
   ಜೊತೆಗೆ ನೀನಿರುವಾಗ ಸಾಧನೆಗಳು
ಲೋಕಲ್ ಬಸ್ಸಿನ ಕಿಟಕಿಯಂತಿವೆ
   ಆ ಕಿಟಕಿಯಿಂದಲೆ ಕಾಣುವ ಕನಸುಗಳು
ನಡು ದಾರಿಯಲ್ಲಿಯೇ ಕರೆದಿವೆ
   ತಣ್ಣನೆ ಸೂಸುವ ಭಾವನೆಗಳು
ಗಾಳಿಯ ಜೊತೆ ಪಯಣ ಬಯಸಿವೆ
   ಕನಸಿಗಾಗಿ ಹೊರಟ ಮನಸ್ಸಿನ ಬಾಗಿಲುಗಳು
ಲೋಕಲ್ ಬಸ್ ನ ಕಿಟಕಿಗಳ ಮರೆತಿವೆ
   ಮನಸ್ಸಿಗೆ ಮುತ್ತಿದ ಕನಸ್ಸಿನ ರೆಕ್ಕೆಗಳು
ಆಗಸದೆತ್ತರಕೆ ಕರೆದೋಯ್ದಿವೆ
   ನಿಲ್ಲಾಣದಲಿ ಬಸ್ಸಿಗೆ ಬ್ರೇಕ್ ಹಾಕಿದಾಗ
ದೇಹ ತನ್ನ ಮನಸ್ಸಿಗಾಗಿ ಒದ್ದಾಡಿದೆ
   ನೆನಪಿಸಿದೆ ನಾ ನಿನ್ನ ಗೆಳೆಯ
ನೀನೆ ನನ್ನ ಮನಸ್ಸಿನ ಒಡೆಯ
   ನಿನ್ನ ಕಂಡ ಕ್ಷಣವೇ ಮನವು
ನಾಚಿಕೆಯಿಂದ ಕಿಟಕಿಯಲ್ಲೆ ಪ್ರೀತಿಸು ಎಂದಿದೆ


ಬುಧವಾರ, ಜನವರಿ 11, 2012

* ಕಂಡ ಕಂಡವರನ್ನ ಕಂಡಿದ್ದೆ * ಕಂಡ ಕಂಡವರನ್ನ ಕಂಡಿದ್ದೆ

ಕೆಂಡದಲ್ಲಿ ಅರಳಿದ ಸಂಪಿಗೆಯನ್ನ

ಸಂಪಿಗೆಯಲ್ಲಿರುವ ಸುವಾಸನೆಯನ್ನ

ಸುವಾಸನೆಯಲಿ ಮುಳುಗಿ ನಗುವವರನ್ನ ಕಂಡಿದ್ದೆ ಕಂಡ ಕಂಡವರನ್ನ ಕಂಡಿದ್ದೆ

ಕೆಂಪಗೆ ಕಂಡರು ಕೆಟ್ಟವರಿರುವುದನ್ನ

ಕೆಟ್ಟವರಲ್ಲಿಯ ದ್ವೇಷದ ಕೆಂಡವನ್ನ

ಕೆಂಡದಲ್ಲಿಯೇ ಕ್ರೋಧಕೆ ಬಲಿಯಾದವರನ್ನ ಕಂಡಿದ್ದೆ ಕಂಡ ಕಂಡವರನ್ನ ಕಂಡಿದ್ದೆ

ಗುಡಿಸಲಲ್ಲಿರುವ ಬಡವರನ್ನ

ಬಡವರ ದುಡಿಮೆಯ ಬೆವರನ್ನ

ಬೆವರಿದ ಮೈಗೆ ಅನ್ನ ಉಣಿಸಿ ಖುಷಿಯಾಗಿರುವವರನ್ನ ಕಂಡಿದ್ದೆ ಕಂಡ ಕಂಡವರನ್ನ ಕಂಡಿದ್ದೆ

ಕತ್ತಲನ್ನ ಬೆಳಕೆಂದು ತಿಳಿದವರನ್ನ

ತಿಳಿದ ಮನಸ್ಸಿನ ಭಾವಗಳ ದೀಪವನ್ನ

ದೀಪದಿಂದ ಕತ್ತಲನು ಓಡಿಸಿ ಬೆಳಗುವವರನ್ನ ಕಂಡಿದ್ದೆ ಕಂಡ ಕಂಡವರನ್ನ ಕಂಡಿದ್ದೆ

ದೇಶಸೇವೆಯೆ ಈಶಸೇವೆ ಎಂದುವರನ್ನ

ಎಂದಿಗೂ ಅಳಿಸದ ದೇಶಪ್ರೇಮವನ್ನ

ದೇಶಪ್ರೇಮದಲ್ಲಿ ರಕ್ಷಣೆಗಾಗಿ ಮಡಿದವರನ್ನ ಕಂಡಿದ್ದೆ ಕಂಡ ಕಂಡವರನ್ನ ಕಂಡಿದ್ದೆ

ಒಂದು ತುತ್ತು ಅನ್ನಾದರೂ ಹಂಚುವವರನ್ನ

ಹಂಚಿದ ಹೃದಯಕೆ ಸಿಗುವ ತೃಪ್ತಿಯನ್ನ

ತೃಪ್ತಿಯಲ್ಲಿ ತಾವು ಹಸಿದವರೆಂದು ಮರೆಯುವವರನ್ನ ಕಂಡಿದ್ದೆ ಕಂಡ ಕಂಡವರನ್ನ ಕಂಡಿದ್ದೆ

ರಕ್ತಸಂಬಂಧವಿಲ್ಲದೆ ಜೀವಾಳವಾಗುವವರನ್ನ

ಜೀವಾಳ ಜೀವಿಗಾಗಿ ತ್ಯಾಗಿಸುವ ಭಾವವನ್ನ

ಭಾವನೆಯಲಿ ಬಂಧಿಸಿ ಅಮರ ಪ್ರೀತಿಸುವವರನ್ನ ಕಂಡಿದ್ದೆ ಕಂಡ ಕಂಡವರನ್ನ ಕಂಡಿದ್ದೆ

ಕೆಂಡದಲಿ ಬೆಂದರೂ ನಗುವವರನ್ನ

ನಗುತ ನಗಿಸುತ ನವಿರಾಗುವುದನ್ನ

ನವಿರಾಗಿ ಕೆಂಡವ ಕೆಂಪು ಸುಮವಾಗಿ ಅರಳಿಸುವವರನ್ನ ಕಂಡಿದ್ದೆ
ಮಂಗಳವಾರ, ಜನವರಿ 10, 2012

ಜಾತಿಗೆ ನೇಣು ಯಾವಾಗ ??


ಸಮವಿಲ್ಲದಿರುವಾಗ ಸುಖವೆಲ್ಲಿ 
ಸುಖವಿಲ್ಲದಿರುವಾಗ ಬದುಕೆಲ್ಲಿ
ಬದುಕೆಲ್ಲ ಜಾತಿ ದ್ವೇಷ ತುಂಬಿರುವಾಗ 
ಪ್ರೀತಿ ಬೆಳೆಯುವುದೆಲ್ಲಿ ?
ನನ್ನದೊಂದು ಪ್ರಾರ್ಥನೆ ಜಾತಿಯ ಮರಣವಾಗಲಿ

ಸ್ವಾರ್ಥದ ಉಡುಪು ತೊಟ್ಟಾಗ 
ಶುಭ್ರತೆ ಎಲ್ಲಿ ?
ನಂಬಿಕಸ್ತನಿಲ್ಲದಿರುವಾಗ 
ಸಂಬಂಧಗಳೆಲ್ಲಿ ?
ಬದುಕೆಲ್ಲ ಕಪಟ ದ್ರೋಹ ತುಂಬಿರುವಾಗ 
ಪ್ರೀತಿ ಬೆಳೆಯುವುದೆಲ್ಲಿ ?
ನನ್ನದೊಂದು ಪ್ರಾರ್ಥನೆ ಜಾತಿಯ ಮರಣವಾಗಲಿ

ಅಹಂಕಾರದ ಕಿರೀಟವಿರುವಾಗ
ನಯ ನಮ್ರತೆ ಎಲ್ಲಿ ?
ಭಾವನೆಗಳೇ ನಶೆಯಲ್ಲಿರುವಾಗ
ಹಸಿದ ಹೊಟ್ಟೆಗೆ ಅನ್ನವೆಲ್ಲಿ ?
ಬದುಕೆಲ್ಲ ಸ್ವಾರ್ಥ ಹಿಂಸೆ ತುಂಬಿರುವಾಗ 
ಪ್ರೀತಿ ಬೆಳೆಯುವುದೆಲ್ಲಿ ?
ನನ್ನದೊಂದು ಪ್ರಾರ್ಥನೆ ಜಾತಿಯ ಮರಣವಾಗಲಿ

ಕೆಟ್ಟವಿಚಾರ ನಮ್ಮದಿರುವಾಗ 
ನಾವು ಮನುಜರೆಲ್ಲಿ ?
ಮುಂದೆ ಮರಣವಿರುವಾಗ
ಜಾತಿ ಭೇದದ ಮಹತ್ವವೆಲ್ಲಿ ?
ಬದುಕೆಲ್ಲ ಲಿಂಗಭೇದ ಕೆಟ್ಟಭಾವ ತುಂಬಿರುವಾಗ 
ಪ್ರೀತಿ ಬೆಳೆಯುವುದೆಲ್ಲಿ ?
ನನ್ನದೊಂದು ಪ್ರಾರ್ಥನೆ ಜಾತಿಯ ಮರಣವಾಗಲಿ
ಈ ಪ್ರಾರ್ಥನೆ ದೇವರಿಗಲ್ಲ 
ಮಾನವರಲ್ಲಿ ?
ಮಾನವನೇ ಜಾತಿ ಹುಟ್ಟಿಸಿದವನು 
ದೇವರೆಲ್ಲಿ ?
ಈ ಜಗತ್ತಿನಲ್ಲಿ ಜಾತಿಯ ಮರಣವಾದರೆ
ಬದುಕು ಬದುಕಲ್ಲ ..
ಇದು ಭಾವದರಮನೆ ಸತ್ಯವಾಸನೆ 
ಸುಖದ ಹಂದರ ಶಾಂತಿ ಮಂದಿರ 
ಪ್ರೀತಿಗಾಯನ ಭೂಮಿಪಾವನ 

ಸೋಮವಾರ, ಜನವರಿ 9, 2012

ಮಾತಿಗೂ ಸಾವುಇನಿಯಾ , ವಚನ ನೀಡಿದ್ದೆ ನೀನು 
ನನ್ನ ಮರೆಯಲಾರೆನೆಂದು 
ಮರೆತಿದ್ದೆ ನೀನು ಇನಿಯ 
ಮರೆಯಲಾರದನ್ನು 
ನಿನ್ನಾಲದ ನೆನಪಿಗೆ ನಾ 
ಭೇಟಿ ನೀಡಿದರೆ
ನೀನಾರೆಂದು ಕೇಳಿವೆ 
ನಿನ್ನ ಮನಸ ದ್ವಾರಗಳು 
ಬಿಕ್ಕಿ ಅಳುವ ನನ್ನ ಭಾವನೆಗೆ 
ರಮಿಸುವರಾರು ???
ಇನಿಯ, ನೀನಿಲ್ಲದ ಜೀವನ ಬೇಡವೆಂದ 
ವಚನ ಪಡೆದ ನನ್ನ ಅಂತರಂಗ ಕಾಯಿಲೆಬೇಡವೆಂದರೂ ಬರುವೆ 
ದೂರ ಓಡಿದರು ಕರೆವೆ 
ದ್ವೇಷಿಸುವೆ ನಾ ನಿನ್ನ 
ಏಕೆ ಪ್ರೀತಿಸುವೆ ನೀ ನನ್ನ 
ಸೋತೆನು ನಾ ಜೀವನಕೆ
ಬೇಸರಿಸಿದೆ ನಾ ನಿನಗೆ 
ಬೆಲೆಯಿಲ್ಲವೇ ? ನನ್ನ ಸುಖಕೆ
ದು:ಖಿಸಿದೆ ನೀ ಒಂದೇ ಸವನೆ 
ನೀ ಕಾನಿದರೆ ನೆನೆವರು ನನ್ನ 
ತಲೆನೋವೆಂದು ಕರೆವರು ನನ್ನ ಹೆಸರನ್ನ 

ಬಾಡದಿರು
ಅರಳಿದ ಹೂವನ್ನು 
ನೋಡಿದರೆ ಖುಷಿಯು
ಸುವಾಸನೆ ಸವಿದರೆ
ದುಂಬಿಯ ರೂಪ ಮನವು 

ಬಾಡಿದ ಹೂವಿಗೆಕಿಲ್ಲ ?
ಭಾವನೆಗಳ ತೆರವು 
ಕಾಡುವುದು ಪ್ರಶ್ನೆ 
ಸೋಲಿನಲ್ಲಿಲ್ಲವೆಕೆ ! ಗೆಲುವು 

ಅರಳಿದ ಸುಮವು 
ಮೆಲ್ಲನೆ ನುಡಿಯಿತು
ಮುದುಡಿದಾಗ ಅಲ್ಲವೇ 
ಹೊಸ ಮೊಗ್ಗು ಬಿಡುವುದೆಂದಿತು

ಹೂವಿಗೆ ಗೊತ್ತುಂಟು 
ಸೋತ ಮೇಲೆಯೇ ಗೆಲುವೆಂದು 
ಬಾಡಿದ ಹೂವು ದು:ಖದಿ
ಮರೆತಿದೆ ಮತ್ತೆ ಗೆಲ್ಲುವುದನ್ನು 

- ನನ್ನ ಗೋಳು -ಬೇಡವೆಂದರೆ ಬರುವೆ
ದೂರ ಓಡಿದರೂ ಕರೆವೆ
ದ್ವೇಷಿಸುವೆ ನಾ ನಿನ್ನ
ಏಕೆ ಪ್ರೀತಿಸುವೆ ನೀ ನನ್ನ
ಸೋತೆನು ನಾ ಜೀವನಕೆ
ಬೇಸರಗೊಂಡೆನು ನಿನಗೆ
ಬೆಲೆಯಿಲ್ಲವೇ?? ನನ್ನ ಸುಖಕೆ
ದುಃಖಿಸುವೆ ನೀ ಒಂದೇ ಸವನೆ
ನೀ ಕಾಣಿದರೆ ನೆನೆವರು ನನ್ನ
ತಲೆನೋವೆಂದು ಕರೆವರು ನನ್ನ ಹೆಸರನ್ನ

- ನೀನಾದೆ ದೂರ -

ಇನಿಯಾ, ವಚನ ನೀಡಿದ್ದೆ ನೀನು
ನನ್ನ ಮರೆಯಾರೆನೆಂದು
ಮರೆತಿದ್ದೆ ನೀನು ಇನಿಯ 
ಮರೆಯಲಾರದನ್ನು
ನಿನ್ನಾಳದ ನೆನಪಿಗೆ ನಾ
ಭೇಟಿ ನೀಡಿದರೆ 
ನೀನಾರೆಂದು ಕೇಳಿದ
ನಿನ್ನ ಮನಸ್ಸಿನ ದ್ವಾರಗಳು
ಬಿಕ್ಕಿ ಅಳುವ ನನ್ನ ಭಾವನೆಗೆ
ರಮಿಸುವವರಾರು??
ಇನಿಯ, ನೀನಿಲ್ಲದ ಜೀವನವೆ ಸಾಕೆಂದ
ವಚನ ಪಡೆದ ನನ್ನ ಮನಸ್ಸು 

ಬುಧವಾರ, ಜನವರಿ 4, 2012

ನಾದಮಯ ಸ್ವರಗಳೆಂದರೆ ಸುಂದರ
ಸರಿಗಮಪದನಿಸ ಮಧುರ

ಕೇಳುವಾಗ ಸಂಗೀತ
ಮನಸ್ಸಾಗುವುದು ಪರಿಣಿತ
ಸರಿಹೊಂದಿವೆ ಎಲ್ಲ ಕಾಗುಣಿತ

ಹೃದಯದಲ್ಲಿ ಬಾರಿಸುವ ವೀಣೆ
ಮೂಕ ಭಾವ ನಲಿದಿದೆ ತಾನೆ
ಸ್ವರ್ಗ ಸುಖವ ಇನ್ನೆಲ್ಲೂ ಕಾಣೆ

ಸಂಗೀತ ಗಾಯನದ ಅಮೃತ ಸುಖ
ಸ್ವರಗಳಾದವು ನನ್ನ ಸಖ
ಭಾವನೆಗಳ ಗೂಡಿಗೆ ಸುಖವೇ ಸುಖ

ಸ್ವರಗಳೆಂದರೆ ಸುಂದರ
ಸರಿಗಮಪದನಿಸ ಮಧುರಬೇಡವೆಂದ ಕನಸು ಬರೆವೇನೆಂದ ಮನಸು


 ಹೆದರಿಕೆಯು ಈಗ ಶಬ್ದಗಳಿಗೆ
ಮನೆ ಬಿಟ್ಟು ಅನಾಥರಾಗುವಿಕೆಗೆ
ಅಪ್ಪಿಕೊಂಡಿವೆ ಅಮ್ಮನ ಕೂಸಿನ ಹಾಗೆ
ಕೋಪವಾದರು ಪ್ರೀತಿಯ ಬಿಡದ ಹಾಗೆ


ಕೆಲ ಶಬ್ದಗಳು ಪುಟದಲಿ ಮೂಡುತಿವೆ
ಜಗವನ್ನು ಕಾಣುವ ಖುಷಿಯೊಳಗೆ
ಹೊಳೆಯುತಿವೆ ರಾತ್ರಿಯ ನಕ್ಷತ್ರದ ಹಾಗೆ
ನಾನೆ ಚಂದಿರನೆಂದು ಕಲ್ಪಿಸಿದ ಹಾಗೆ


ಕೆಲ ಶಬ್ದಗಳು ಬಾಡಿಗೆ ವಸ್ತುವಾಗಿವೆ
ಹಲವು ಬಾರಿ ಸಂಬಳ ನೆನಪಿಸುತ್ತವೆ
ಶುಗರಲೆಸ್ಸ ಚಹಾ ಕುಡಿಯುವ ನೆಪದ ಹಾಗೆ
ಹಗಲಲ್ಲೂ ಕನಸು ತೋರುವ ಮನಸ ಹಾಗೆ

ನನ್ನ ಸಾಹಿತ್ಯ ದಿನದ ಅನುಭವ..ಹೊಸ ವರುಷದ ಶುರುವಾತು ಸಾಹಿತ್ಯದಿಂದ


          ಈ ಸುದಿನ ಜನವರಿ 1, 2012 ಇಂಗ್ಲೀಷ ಕ್ಯಾಲೆಂಡರ ಪ್ರಕಾರ ಹೊಸ ವರುಷದ ಮೊದಲ ದಿನ. ನನಗೆ ಸಾಹಿತ್ಯ ಸಂತೆಯ ದಿನ. ದಿನವಿಡಿ ಸಾಹಿತ್ಯ ಗದ್ದಲದಿಂದ ತುಂಬಿದ ಸಾಹಿತ್ಯ ಸಮ್ಮೇಳನ. "ಮನ ಮನಗಳಲ್ಲಿ ಕನ್ನಡದ ಉಸಿರು, ಎದೆ ಬಡಿತವು ಹೇಳಿದೆ ಕನ್ನಡದ ಹೆಸರು, ಸಾಹಿತ್ಯದ ನುಡಿಗಳು ಹೆಪ್ಪಾಗಿದ್ದ ಮೊಸರು, ಅಧ್ಯಕ್ಷರ ಭಾಷಣದಿಂದ ಕರಗಿತ್ತು ಆಂಗ್ಲರ ಕೆಸರು" . ಈ ಸಮ್ಮೇಳನ ನಡೆದದ್ದು ನಮ್ಮ ಜಮಖಂಡಿ ತಾಲೂಕಿನ, ಸಾವಳಗಿ ಗ್ರಾಮದಲ್ಲಿ. ಕನ್ನಡಾಂಬೆಯ ಧ್ವಜವು ಆಗಸದ ತುಂಬ ಮೂಡಿತ್ತು. ಭುವನೇಶ್ವರಿ ದೇವಿಯ ಮೆರವಣಿಗೆಯಲ್ಲಿ ಕಳಸಗಳೇ ಸ್ವಾಗತ ಕೋರುವಂತಿತ್ತು. ಸಂಗೀತ- ವಾದ್ಯ ಕನ್ನಡ ಹಬ್ಬಕ್ಕೆ ಎಲ್ಲ ಕನ್ನಡಿಗರನ್ನು ಕೈ ಮಾಡಿ ಕರೆದು ನಲಿದಾಡು ಎಂದಿತ್ತು. ಪ್ರಕೃತಿಯು ಕೂಡ ಕನ್ನಡದ ಸೌಂದರ್ಯವನ್ನು ಹೆಚ್ಚಿಸಿತ್ತು.
          ಸಮ್ಮೇಳನಾಧ್ಯಕ್ಷರಾದ ಶ್ರೀ ಎಂ.ಎಸ್.ಸಿಂಧೂರ ಅವರ ನುಡಿಯು ರಾಷ್ಟ್ರಲಾಂಛನದಲ್ಲಿಯ ಸಿಂಹ ಘರ್ಜನೆಯಾಗಿತ್ತು. ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ, ಬರಹ ಕೃಷಿ, ಉದ್ಯೋಗ ಹಾಗೂ ಸರ್ಕಾರ ಕನ್ನಡದ ಅಮರ ಉಳಿವಿಗಾಗಿ ಕೈಗೊಳ್ಳಬೇಕಾದ ಹಲವು ಬದಲಾವಣೆಗಳ ವಿಚಾರಗಳನ್ನು ರಾಮನ ಬಾಣದ ಹಾಗೇ ಎಲ್ಲರ ಮನಕ್ಕೆ ಮುಟ್ಟುವ ರೀತಿ ಕೂಗಿ ಕೂಗಿ ಕನ್ನಡವನ್ನು ಕನ್ನಡಿಯಲ್ಲಿ ತೋರಿಸಿದರು.ಇಲ್ಲಿಯ ಶಾಸಕರಾದ ಶ್ರೀ ಶ್ರೀಕಾಂತ ಕುಲಕರ್ಣಿಯವರು ಸಿರಿಗನ್ನಡಂ ಗೆಲ್ಗೆ ಎಂದು ಹೇಳುತ್ತ ಕನ್ನಡ ಕನ್ನಡವೆಂದು ನಲಿದಾಡಿದರು ಮತ್ತು ಈ ತಾಲೂಕಿನ ಜನರಿಗೆಂದೆ ಇರುವ ಉಪಯುಕ್ತ ಬೇಡಿಕೆಗಳನ್ನು ಸರಕಾರದ ಮುಂದಿಟ್ಟೆದ್ದೇನೆ ಮತ್ತು ಬೇಗ ಅನುಮತಿ ದೊರಕುವುದು ಎಂದು ಆತ್ಮವಿಶ್ವಾಸದಿಂದ ನುಡಿದರು. ತೇರದಾಳ ಶಾಸಕರಾದ ಶ್ರೀ ಸಿದ್ದು ಸವದಿ, ಶ್ರೀ ನಿರುಪಾಧೀಶ ಮಹಾಸ್ವಾಮಿಗಳು, ಚನ್ನಬಸವ ಸ್ವಾಮಿಗಳು, ಡಾ. ಸಂಗಮೇಶ ಬಿರಾದಾರ ಮತ್ತು ಹಲವು ಗಣ್ಯ ವ್ಯಕ್ತಿ, ಸಾಹಿತಿಗಳು ವೇದಿಕೆ ಮೇಲೆ ಆಸೀನರಾಗಿದ್ದರು.
             ಸಾಹಿತ್ಯ ಪರಂಪರೆ ಎಂಬ ಗೋಷ್ಠಿಯಲ್ಲಿ ಕಾವ್ಯ ಮತ್ತು ನಾಟಕ, ಕಲೆ ಮತ್ತು ಕಾದಂಬರಿ,ಜಾನಪದ ಸಾಹಿತ್ಯ ಹಾಗೂ ಸಂಕೀಣಱ ಸಾಹಿತ್ಯ ಇವೆಲ್ಲವುಗಳ ಬಗ್ಗೆ ಹಿರಿಯ ಸಾಹಿತಿಗಳು ತಮ್ಮ ಅನುಭವದ ಮಾತುಗಳನ್ನು ಹೇಳಿ ಸಾಹಿತ್ಯದಲ್ಲಿರುವ ಸುಖದ ವರ್ಣನೆ ಸುಂದರವಾಗಿ ತೋರಿಸಿ ಕೊಟ್ಟರು.ಸಾಹಿತ್ಯ ಸಮ್ಮೇಳನದಲ್ಲಿ ಕಿವಿಗೆ ಕೇಳುತ್ತಿದ್ದ ಎಲ್ಲ ಶಬ್ದಗಳು ಹೃದಯಕೆ ಸವಿ ಸಾಹಿತ್ಯದ ಮೃಷ್ಟಾಣ್ಣ ಭೋಜನ ನೀಡಿದಂತಿತ್ತು.
             ಇನ್ನೂ ನನಗೆ ಪ್ರೀಯವಾದ ಗೋಷ್ಠಿ ಅದುವೇ ಕವಿಗಗೋಷ್ಠಿ. ನನಗೂ ಕೂಡ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಮಂತ್ಇಸಿದ್ದರು. ನನಗಾದ ಖುಷಿಗೆ ಅಂತ್ಯವಿಲ್ಲ ಆದರೂ ಹೆದರಿಕೆ ನನ್ನನ್ನೂ ಬೆದರಿಸುತ್ತಿತ್ತು.ನನ್ನ ಕವಿಗುರುಗಳಾದ ಡಾ.ಮಾಳಿಯವರ ಆಶಿರ್ವಾದ ಮತ್ತು ನನ್ನ ಸಂಗಾತಿಯ ವಿಶ್ವಾಸ ನನ್ನ ಆತಂಕವನ್ನು ಕಡಿಮೆ ಮಾಡಿತ್ತು. ಇದಕ್ಕಿಂತ ಮೊದಲು ಕೂಡ ನಾನು ಅಥಣಿ ತಾಲೂಕಿನ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಅವಕಾಶ ದೊರಕಿ ತುಂಬ ಖುಷಿಯಾಗಿತ್ತು ಆದರೆ ಅದು ನನ್ನ ಸ್ವಂತ ಗುರುತಿಲ್ಲದ ಪ್ರತಿಭೆ ಎನಿಸಿತ್ತು. ಈ ದಿನದಂದು ನನ್ನ ಚಿಕ್ಕ ಪ್ರಯತ್ನದ ದೊಡ್ಡ ಫಲವಾಗಿ ತಾಲೂಕಾ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಯಲ್ಲಿ ಆಮಂತ್ರಿಸಲಾಗಿತ್ತು.
               ಶ್ರೀ ಸಿದ್ಧರಾಜ ಪೂಜಾರಿ ಅವರು ಕವಿಗೋಷ್ಠಿಯ ಅಧ್ಯಕ್ಷರು. ಆಶಯ ನುಡಿಗಳನ್ನು ಮಕ್ಕಳ ಸಾಹಿತಿಯೊಬ್ಬರು ಸುಂದರವಾಗಿ ನುಡಿದು ನಮಗೆಲ್ಲರಿಗೂ ಅಭಿನಂದನೆ ತಿಳಿಸಿದರು. ಕವನವಾಚನ ಶುರುವಾಗುತ್ತಿದ್ದಂತೆ ನನ್ನ ಎದೆಬಡಿತ ಜ್ವಾಲಾಮುಖಿಯ ಹಾಗೇ ಕಂಪಿಸುತ್ತಿತ್ತು.ನಯವಾದ ನಯನಗಳು ನನ್ನ ಸ್ಫೂರ್ತಿ ಸಂಗಾತಿಯನ್ನ ಶೋಧಿಸುತ್ತಿತ್ತು. ಹೃದಯ ದೇವಗುರುವಿನ ಆಶಿರ್ವಾದ ಬಯಸಿತ್ತು. ಉಳಿದ 15 ಕವಿಗಳು ತುಂಬಾ ದೊಡ್ಡವರು ನ್ನ ಕವನ ಹೇಗೆನಿಸುವುದೋ ಎಂಬ ವಿಚಾರ ಮನದಲ್ಲಿ ಮನೆಮಾಡಿತ್ತು. ಕೆಲವರು ಕವನ ಓದಿದ್ದಾಯಿತು. ಎಲ್ಲ ಕವನಗಳು ಸುಂದರವಾಗಿದ್ದವು.  ನನ್ನ ಹೆಸರು ಕರೆದಾಗ ಎದ್ದು ನಾನು ಬರೆದ ಮತ್ತು ನನ್ನ ಗುರುಗಳು ತಪ್ಪುಗಳನ್ನು ತಿದ್ದಿದ 'ಬೃಂದಾವನ' ಎಂಬ ಕವನ ಶೀರ್ಷಿಕೆಯಿಂದ ಶುರುವಾಗಿ 'ಬದುಕಿನ ದಿನಗಳೆಲ್ಲ ಬೃಂದಾವನವಾದರೆ .. ಬದುಕೆಲ್ಲವೂ ಮೈ-ಸೂರು ' ಎಂದು ಹೇಳತ್ತ ಮುಕ್ತಾಯವಾಯಿತು.
ನನ್ನ ಕವನದ ಹೆಸರು: "ಬೃಂದಾವನ"
ಬಣ್ಣ ಬಣ್ಣದ ಮೀನು
ಮಿಂಚು ಮಿನುಗುವ ಕಣ್ಣು
ನಿನ್ನ ಜೊತೆಗಿನ ಆಟ
ನಯನಗಳ ಚೆಲ್ಲಾಟ
ಮುಟ್ಟಿ ನೋಡು ಎಂದು 
ಮುತ್ತು ಕೊಡಲು ಬಂದು 
ಪ್ರೀತಿಸದ ಹಾಗೆ ಕಣ್ಣು ಮಿಟುಕಿಸಿದವು 
ಬೃಂದಾವನದ ಮೀನು

ಹಸಿರು ಹುಲ್ಲಿನ ಗರಿಕೆ
ಅಪ್ಪಿಕೊಳ್ಳುವ ಬಯಕೆ
ಮಂಜು ಹನಿಗಳ ಮುತ್ತು
ನಕ್ಷತ್ರಗಳ ಗಮ್ಮತ್ತು 
ಹೂಗಳ ನಗುವು, ಪ್ರೀತಿಯ ನೋಟ
ನಿಸರ್ಗ ಸುಖದ ಅನುಭವದೂಟ
ಬೃಂದಾವನದ ಹಸಿರು ಉಸಿರಲ್ಲಿ ಕಂಡೆವು

ಕೃಷ್ಣರಾಜಸಾಗರದ ತುಂಬ 
ಗೋಪಿಕೆಯರ ಕನಸುಗಳು
ಗೆಜ್ಜೆ ಕಟ್ಟಿಕೊಂಡು ನರ್ತಿಸುವ
ರಾಗ ಕಾಮನಬಿಲ್ಲಗಳು
ನಾದಕ್ಕೆ ತಾಳ ಹಾಕುವ ಕಾರಂಜಿಗಳ
ಕಣ್ಣಿನೊಳಗೆ ಪುಣ್ಯ ತುಂಬುವ ಸ್ಥಳವಿದು

ಇಲ್ಲಿಯ ಹಸಿರು ನೀರಿನ ಉಸಿರು
ಬಣ್ಣ ಕಾರಂಜಿ ನವಿಲುಗಣ್ಣು
ಗೆಳೆಯಾ ಇದು ಮೈ-ಸೂರು
ಸೌಂದರ್ಯದ ಸೂರು
ಬದುಕಿನ ದಿನಗಳೆಲ್ಲ ಬೃಂದಾವನವಾದರೆ ..!
ಬದುಕೆಲ್ಲವೂ  ಮೈ-ಸೂರು

              ಈಗ ನನ್ನೆದೆಯ ಬಡಿತ ಸೌಮ್ಯವಾಗಿತ್ತು. ಮುಖದಲ್ಲಿ ಮಂದ ನಗುವು ಅರಳಿತ್ತು. ಉಳಿದೆಲ್ಲರ ಕವನವಾಚನ ಮುಗಿದ ಮೇಲೆ ಕವಿಗೋಷ್ಠಿ ಅಧ್ಯಕ್ಷರ ಹಿತನುಡಿಗಳ ಸುರಿಮಳೆ ಸುರಿದಿತ್ತು. ಯುವ ಬರಹಗಾರರನ್ನು ಪ್ರೋತ್ಸಾಹಿಸಿದರು.ಕವಿಗಳಿಗೆ ಕಲವು ಕಿವಿಮಾತುಗಳನ್ನು ಹೇಳಿ ಬರಹ ಹೇಗಿರಬೇಕು?, ಭಾವ ತುಂಬಿರಬೇಕು ಎಂದು ಸರಳ ಸುಂದರವಾಗಿ ಬಿಡಿಸಿ ಹೇಳಿದರು. ಅವರ ಕವಿಮನದ ಕವನಗಳನ್ನು ಹೇಳಿ ಕವಿಗಳಿಗೆ ಪ್ರೋತ್ಸಾಹಿಸಿದರು. 
              ಉಳಿದ ಕೆಲ ಕವಿಗಳು ನನ್ನ ಕವನ ಕೇಳಿದ ನಂತರ ಮೈಸೂರಿಗೆ ಹೋಗಿ ಬಂದೆನಿಸಿತು ಅಂದರು. ವಾಚನ ಸುಂದರವಾಗಿತ್ತೆಂದರು. ನನ್ನ ಮೊಗದಲ್ಲಿ ಸಂತಸದ ಹೂವು ಅರಳಿ ಪಾತರಗಿತ್ತಿಯಾದ ನನ್ನ ಸಂಗಾತಿಯನ್ನು ನೆನೆಪಿಸಿತ್ತು. ನನಗೆ ಕವಯತ್ರಿ ವಿಮಲಾ ಬೊಮ್ಮನಹಳ್ಳಿಯವರು ಬರೆದ ಹೆಣ್ಣು ಎಂಬ ಕವನ ಅತಿಪ್ರೀಯವಾಗಿತ್ತು. ಸಮಾಜದಲ್ಲಿ ಉಪಯೋಗವಾಗುವ ಅಂದ್ರೆ ಎಲ್ಲರ ಮನಸ್ಸಿಗೆ ಮುಟ್ಟಿ ಸತ್ಯದ ಮತ್ತು ಒಳ್ಳೆತನದ ನಂದಾದೀಪ ಬೆಳಗಲು ಸಹಾಯವಾಗುವ ಕವನಗಳನ್ನು ನಾನು ಬರೆಯಬೇಕೆಂಬ ಮಹದಾಸೆ ಮನದಲ್ಲಿ ಮೂಡಿತ್ತು. ಕವಿ ಶಂಕರ ಲಮಾಣಿಯವರ ಕವನವಾಚಿಸುವ ಧ್ವನಿಯು ರಾಜಮಹಲಿನಲ್ಲಿ ಆಜ್ಞೆ ಘೋಷಿಸಿದಂತಿತ್ತು ಹಾಗೂ ಕನ್ನಡಿಗರನ್ನು ಎಚ್ಚರ ಕವನದಿಂದ ಎಚ್ಚರಿಸಿದಂತಿತ್ತು. ಕವಯತ್ರಿ ಶೋಭಾ ಕಾಗಿ ಅವರ ಅಮ್ಮ ಕವನವನ್ನು ಗಾಯನವಾಗಿ ನುಡಿದಾಗ ಮಕ್ಕಳಿಗೆ ಅಮ್ಮನ ಮತ್ತು ಅಮ್ಮನಿಗೆ ಮಕ್ಕಳ ನೆನೆಸುವಂತಿತ್ತು. ಕೆಲ ಕವಿಗಳು ಆಡು ಭಾಷೆಯಲ್ಲಿ ಚೆಂದಾದ ಕವನ ರಚಿಸಿದ್ದರು. ಕವಿಗೋಷ್ಠಿ ಸಾಹಿತ್ಯದ ಸೌಂದರ್ಯವನ್ನು ಹೆಚ್ಚಿಸಿತ್ತು.
              ವಿಶೇಷ ಉಪನ್ಯಾಸದಲ್ಲಿ ಶ್ರೀ ಬಸವರಾಜ ಯಡಹಳ್ಳಿಯವರು ಸಮ್ಮೇಳನಾಧ್ಯಕ್ಷರ ಬದುಕು ಬರಹದ ಕುರಿತು ಹೇಳಿದ್ದು ತುಂಬಾ ಶ್ಲಾಘನೀಯ. ತಾಲೂಕ ಮುಳುಗಡೆ ಸಂತ್ರಸ್ತರು ಮತ್ತು ಪತ್ರಿಕಾ ಪರಂಪರೆ ಎಂಬ ವಿಷಯದ ಮೇಲೆ ಶ್ರೀ ಬಾಬುರೆಡ್ಡಿ ತುಂಗಳ ಅವರು ಉಪನ್ಯಾಸ ನೀಡಿ ಕನ್ನಡಿಗರ ವೀರ ಗುಣ ಬೆಳೆಸಿಕೊಳ್ಳು ಸಹಾಯ ಮಾಡಿದರು. ಪ್ರಜೆಗಳಾಗಿ ಕೇಳುವ ಕೆಲ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು.
              ಇನ್ನೂ ಎಲ್ಲರು ಆಕರ್ಷಣೆಗೆ ಒಳಗಾಗಿಸುವ ಕಾವ್ಯ-ಗಾಯನ-ಕುಂಚ ಕಾರ್ಯಕ್ರಮ ಶುರುವಾಯಿತು. ಶ್ರೀ ಅರ್ಜುನ ಕೋರಟಕರ ಅವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿಗಳಾದ ಗಿರೀಶ ಕಾಂಬಳೆ, ಶಾರದಾ ಮುಳ್ಳೂರ, ಕಲ್ಲೇಶ ಕುಂಬಾರ, ಚಿತ್ತರಂಜನ ನಾಂದ್ರೇಕರ ಮತ್ತು ಶಿವಾನಂದ ಬಾಗಲಕೋಟಮಠ ಕವನವಾಚನ ಮಾಡಿದರು. ಗಾಯಕರಾದ ರಾಘವೇಂದ್ರ ಕಟ್ಟಿ, ನೇಹಾ ಮೈಗೂರ,ಸರಸ್ವತಿ ಸಬರದ ಇವರೆಲ್ಲರೂ ಸ್ವರ ಸಂಗೀತದ ಅಲೆಗಳನ್ನೆಬ್ಬಿಸಿದರೆ ಕುಂಚ ಕಲಾವಿದರಾದ ಪ್ರಸಿದ್ಧ ಬಸವರಾಜ ಗವಿಮಠ, ರಶ್ಮಿ ಗವಿಮಠ, ಚೌಧರಿ, ಹಂಪಣ್ಣವರ ಮತ್ತು ತುಕ್ಕಣ್ಣವರ ಇವರೆಲ್ಲರೂ ಬಣ್ಣ ಬಣ್ಣಗಳ ಕವನಗಳನ್ನು ಚಿತ್ರಿಸಿದರು. ಎಲ್ಲ ಕವನಗಳು ಗಾಯನವಾದಾಗ ಹೃದಯದಲ್ಲಿ ವೀಣೆ ಬಾರಿಸಿದಂತಾಗಿತ್ತು. ಕೆಲವೇ ಕ್ಷಣಗಳಲ್ಲಿ ಬಿಡಿಸಿದ ಚಿತ್ತಾರ ಮುಂಗಾರು ಮಳೆಯಲ್ಲಿ ಕಾಮನಬಿಲ್ಲನು ನೋಡಿದಷ್ಟು ಖುಷಿಯಾಗಿತ್ತು.
               ಕೊನೆಯದಾಗಿ ಸನ್ಮಾನ ಮತ್ತು ಸಮಾರೋಪ ಸಮಾರಂಭದಲ್ಲಿ  ಇಲ್ಲಿಯ ಹಲವು ಮಹನೀಯರಿಗೆ ಸನ್ಮಾನ ಮಾಡಲಾಯಿತು. ಜಮಖಂಡಿಯ ತಹಶೀಲ್ದಾರರಾದ ಡಾ.ಸಿದ್ದು ಹುಲ್ಲೋಳಿಯವರು ತಮ್ಮ ಆಶಯ ನುಡಿಯಲ್ಲಿ ಮನಸೂಕ್ತ  ಕನ್ನಡದ ಪ್ರೇಮವನ್ನು, ಕನ್ನಡದ ಗೌರವವನ್ನು ಎತ್ತಿ ಹಿಡಿದರು. ನಮ್ಮ ತಾಲೂಕಿನಲ್ಲಿ ಸಾಹಿತಿಗಳ ಸಂಖ್ಯೆ ಅಪಾರವೆಂದು ಹೇಳಿ ಖುಷಿ ಪಟ್ಟರು ಮತ್ತು ಮುಂದಿನ ಕೆಲವು ತಿಂಗಳಲ್ಲಿ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನ ಜಮಖಂಡಿಯಲ್ಲಿ ನಡೆಯಬೇಕು ಮತ್ತು ಎಲ್ಲ ತರಹದ ಸಹಾಯ ಈ ಕನ್ನಡ ಭೂಮಿಗಾಗಿ ಮಾಡುವೆನೆಂದು ಕರ್ತವ್ಯಬದ್ಧರಾಗಿ ಹೇಳಿ ಎಲ್ಲ ಹೃದಯಗಳ ಪ್ರೀತಿಯ ಚಪ್ಪಾಳೆಗೆ ಪಾತ್ರರಾದರು. ಇನ್ನೂ ವಿಶೇಷವೆಂದರೆ ಎಂಬತ್ತು ವರುಷ ವಯಸ್ಸಿನ ಸಾಹಿತಿಗಳೊಬ್ಬರು ಈ ಸಮ್ಮೆಳನದಲ್ಲಿ ಉಪಸ್ಥಿತರಿದ್ದು ಸಮಾರೋಪ ಸಮಾರಂಭದ ಕಳೆಯನ್ನು ಹೆಚ್ಚಿಸಿದ್ದರು. ಆ ಮಹಾನ್ ಸಾಹಿತಿಗಳ ಹೆಸರು ಡಾ.ಪಂಚಾಕ್ಷರಿ ಹಿರೇಮಠ. "ಅವರ ಧ್ವನಿಯಲ್ಲಿ ಯುವಜನರ ಕೂಗಿತ್ತು. ಮೊಗದಲಿ ಸಂತಸದ ಕಮಲ ಅರಳಿತ್ತು, ಅವರಲ್ಲಿ ಕನ್ನಡ, ಹಿಂದಿ, ಉರ್ದು ಭಾಷೆಗಳ ಜ್ಞಾನಭಂಡಾರವಿದೆ. ಬರವಣಿಗೆ ಮತ್ತು ಓದು ಅವರ ಬದುಕಾಗಿದೆ. ಪ್ರೀತಿ, ಅಕ್ಕರೆ, ವಿಶ್ವಾಸ ಮತ್ತು ಒಳ್ಳೆತನವೇ ಅವರ ಮೆಚ್ಚುಗೆಯ ವಸ್ತುಗಳು. ಜೀವನದಲ್ಲಿ ಬೇಸರಗೊಳ್ಳದೆ ಸುಂದರ ಮಧುರ ಕವನದ ಹಾಗೇ ಬಾಳಬೇಕೆಂದರು. ಕೊನೆಗೆ ಎಲ್ಲರಿಗೂ ಜೀವನದಲ್ಲಿ ಸುಖಿಯಾಗಿರಿ ಎಂದು ಹಾರೈಸುತ್ತ ಸಾಹಿತ್ಯ ಸಮ್ಮೇಳನಕ್ಕೆ ಪೂರ್ಣವಿರಾಮವಿಟ್ಟರು. ಜೈ ಕರ್ನಾಟಕ.

ಇಂದ,
ಸಿದ್ಧಕೀರ್ತಿ ಪ್ರಕಾಶನ,
ಕೀರ್ತೀ ಸಿದ್ದು ಹುಲ್ಲೋಳಿ
ಜಮಖಂಡಿ.

{ ನನ್ನ ಸಾಹಿತ್ಯ ದಿನದ ಸುಖವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತ್ತು ಆದ ಕಾರಣ ಎಲ್ಲ ಓದುಗರಿಗೂ ನನ್ನ ಮನಸ್ಸಾರೆ ಧನ್ಯವಾದಗಳು.}