ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಶನಿವಾರ, ಅಕ್ಟೋಬರ್ 2, 2010

ನೆನಪಿನ ಸಂಪುಟ ..


   ಆ ಹಳೆ ನೆನಪುಗಳು ಇಂದು  ಮಾತಾಗಿ ಬಂದವು.ಈ ಕಾಗದಕ್ಕೆ ಹೊಸ ರೂಪ ತಂದವು .ಚಿಕ್ಕವರಿದ್ದಾಗ ಶಾಲೆಯಲ್ಲಿನ ಆ ಹಳೇ ನೆನಪುಗಳೇ ಇವತ್ತು ಹೊಸ ನಗುವಿನ ಉಲ್ಲಾಸ ನೀಡಿದವು .ಶಾಲೆಯ ಎಲ್ಲ ಮಕ್ಕಳಿಗೆ  ಗಾಂಧಿ ಜಯಂತಿ ಎಂದರೆ ಬಲು ಹಿಗ್ಗು  .ಒಂದು ತಿಂಗಳ  ಮುಂಚಿತವಾಗಿಯೇ ನಾವು ದಾರಿ ಕಾಯುತ್ತಿದ್ದೇವು. ನೀವು ನಾನು ಮತ್ತು ನಮ್ಮ ಶಾಲೆಯ ಮಕ್ಕಳು ಗಾಂಧೀಜಿಯವರ ಪ್ರೀಯರೆಂದು  ಭಾವಿಸಿರಬಹುದು .ಆದರೆ ನಿಜವಾದ ಸತ್ಯ ಸಂಗತಿಯನ್ನು ಇಂದು ನೆನಪಿಸಿದರೆ ಮುಖದಲ್ಲಿ ತುಂಬಾ ನಗುವಿನ ನಾಚಿಕೆ ಕಾಣಬಹುದು .
     ಚಿಕ್ಕವರಿದ್ದಾಗ ನಮಗೆ ಅಜ್ಜಿ ಊರಿಗೆ ಹೋಗುವ ಮಹದಾಸೆ ಇರುತಿತ್ತು. ಗಾಂಧಿಜಯಂತಿಯ ನಂತರ ನಮಗೆ ಒಂದು ತಿಂಗಳ ಕಾಲ ರಜೆ ಇರುತಿತ್ತು .ಹೀಗಾಗಿ ನಾವೆಲ್ಲರೂ ಗಾಂಧಿಜಯಂತಿಯ ಸಂಭ್ರಮವನ್ನು ಆಚರಿಸಲು ತಿಂಗಳ ಮೊದಲಿನಿಂದಲೇ ದಾರಿ ಕಾಯುತಿದ್ದೆವು . ಇದಕ್ಕಾಗಿ ಗಾಂಧಿಜಿಯವರು ನಮ್ಮೆಲ್ಲರ ಪ್ರೀಯರಾಗಿದ್ದರು .ಅಕ್ಟೋಬರ್ ೦೨ ರಂದು ನಾವು ಅವರ ಬಗ್ಗೆ ಭಾಷಣ ಹೇಳುತಿದ್ದೆವು ಜೊತೆಗೆ ಅಭಿನಯವನ್ನು ಮಾಡುತಿದ್ದೆವು .ಆ ದಿನದ ವೇಷ ಭೂಷಣ ಬಲು ಆನಂದಮಯವಾಗಿರುತಿತ್ತು ಯಾವುದೋ     ಹುಡುಗನಿಗೆ  ಗಾಂಧೀ ವೇಷ ಧರಿಸಲು ತಲೆ ಬೋಳಿಸುತ್ತಿದ್ದರು. ಹುಡುಗಿಯರು ಖಾದಿ ಬಿಳಿ ಸೀರೆ ಉಟ್ಟು , ಕುಂಕುಮದ ಬೊಟ್ಟಿಟ್ಟು ಭಾರತೀಯ ನಾರಿ ನಾ ಅಬಲೆಯಲ್ಲ ಎಂದು ಎತ್ತಿ ತೋರುವ ಸಂಕೇತ ಕಾಣುತ್ತಿತ್ತು . ಗಾಂಧೀಜಿಯವರ ಪಾತ್ರದ ಸಲುವಾಗಿ ನಾವೆಲ್ಲರೂ ಕೂಡಿ ಚರಕವನ್ನು ಮಾಡುತ್ತಿದ್ದೆವು.
    ಹಳೆಯ ಅಜ್ಜರ ಹತ್ತಿರ ಹೋಗಿ ಅವರ ಕನ್ನಡಕವನ್ನು ಬೇಡುತಿದ್ದೆವು. ಆ ಅಜ್ಜ ಮನಸಿಲ್ಲದೇ ಅಥವಾ ಒಡೆಯುವರೋ ಎಂಬ ಹೆದರಿಕೆಯಿಂದ ಕನ್ನಡಕವನ್ನು ನೀಡುತ್ತಿದ್ದರು . ಆ ಹುಡುಗ ಗಾಂಧಿಜಿಯಾದಾಗ ಕನ್ನಡಕ ಧರಿಸಿದ್ದನ್ನು ನೋಡಿ, ಅಜ್ಜ ನಾನು ಗಾಂಧೀಜಿ ಆಗಬೇಕೆಲ್ಲವೇ ಎಂದು ಕನಸು ಕಂಡು ಮುಗುಳ್ನಗೆ ಬೀರಿದ್ದೇನು ಸುಳ್ಳಲ್ಲ .
    ಗಾಂಧೀಜಿಗೆ ಕೋಲು ಹುಡುಕುವ ಸಲುವಾಗಿ ಅರ್ಧ ದಿನ ಶಾಲೆಗೆ ಚಕ್ಕರ ಹಾಕಿ ಹೊಲದೊಳಗೆ ಆಟವಾಡಿ ಬರುವಾಗ ಕೋಲು ತರುತ್ತಿದ್ದೆವು .ಗಾಂಧಿಜಿಯವರ ಮಿತ್ರರ ಪಾತ್ರದಲ್ಲಿ ಸುಭಾಷ ಚಂದ್ರ ಭೋಸ್ ,ಸರದಾರ್ ವಲ್ಲಭ ಭಾಯಿ ಪಟೇಲ ,ಜವಾಹರ ಲಾಲ ನೆಹರು,ಲಾಲ ಬಹಾದ್ದೂರ ಶಾಸ್ತ್ರೀ ಮುಂತಾದ ಗಣ್ಯ ವ್ಯಕ್ತಿಗಳ ಪಾತ್ರದಲ್ಲಿ ಉಳಿದ ಹುಡುಗರು ಕಾಣುತ್ತಿದ್ದರು .ನಮ್ಮ ಶಾಲೆಗೆ ಅತಿಥಿಗಳಾಗಿ ಬಂದವರು ಗಾಂಧೀಜಿಯವರ ಬಗ್ಗೆ ಮಾತನಾಡುತ್ತಿದ್ದರು .
  ಕಾರ್ಯಕ್ರಮದ ಅಧ್ಯಕ್ಷರೇ ಗುರು - ಹಿರಿಯರೇ , ಶಾಲೆಯ ಮಕ್ಕಳೇ ಇವತ್ತು ಗಾಂಧೀಜಿಯವರ ಹುಟ್ಟುಹಬ್ಬ .ನಮ್ಮ ದೇಶಕ್ಕೆ ಸ್ವಾತಂತ್ರವನ್ನು ತಂದು ಕೊಟ್ಟ ಮಹಾನ್ ವ್ಯಕ್ತಿ .ಗಾಂಧೀಜಿಯವರು ಅಶಾಂತಿಯನ್ನು ಹೋಗಲಾಡಿಸಿದರು ಸತ್ಯವೇ ತನ್ನ ತತ್ವ ಎಂದು ಹೇಳುವಷ್ಟರಲ್ಲಿಯೇ ಸೊಳ್ಳೆಯೊಂದು ನಮ್ಮ ಅತಿಥಿಗಳಿಗೆ ಕಚ್ಚಿತು , ಆಗಲೇ ಅವರು ಹೊಡೆದು ಕೊಂದರು .ನಂತರ ಅಹಿಂಸೆಯ ದಾರಿ ತೋರಿಸಿದ ರಾಷ್ಟ್ರಪಿತ ಎಂದು ಹೇಳಿದರು.ನಮ್ಮ ದೇಶ ರಾಮರಾಜ್ಯವಾಗಲಿ ಎಂದು ಹಾರೈಸಿದರು .
      ಇದರಲ್ಲಿ ಹಿಂದೆ ಕುಳಿತ ಮಕ್ಕಳು ಭಾಷಣ ಮುಗಿದ ನಂತರ ಅಹಿಂಸೆಯ ದಾರಿ ಹೇಳಿ ನಮ್ಮುಂದೆಯೇ ಸೊಳ್ಳೆ ಕೊಂದರಲ್ಲವೇ ಎಂದು ವಕ್ರ ನಗೆ ಬೀರಿದರು. ಆದರೆ ಇದರಲ್ಲಿ ಖುಷಿಯ ಸಂಗತಿ ಏನೆಂದರೆ ನಮ್ಮ ಶಾಲೆಯ ಮಕ್ಕಳು ದೊಡ್ಡವರ ಕಹಿ ಸಣ್ಣ ತಪ್ಪನ್ನು ಕಂಡು ಹಿಡಿದಿದ್ದರು .ತಾವು ಆ ತಪ್ಪು ಮಾಡಬಾರದೆಂದು ನಿರ್ಧರಿಸಿದರು. ಸಣ್ಣ ಪ್ರಾಣಿಯ ಹಿಂಸೆಯೂ ಅಹಿಂಸೆಯನ್ನು ದೂರ ಮಾಡುವುದು ,ಸಣ್ಣ ಸುಳ್ಳು ಸತ್ಯವನ್ನು ಮುಚ್ಚಿಡುವುದು ಮತ್ತು ಸ್ವಲ್ಪ ಕೋಪವೇ ಈ ದೇಶದ ಶಾಂತಿಯನ್ನು ಹೋಗಲಾಡಿಸುವುದು ಎಂದು ಮಕ್ಕಳು ತಮ್ಮ ತಮ್ಮಲ್ಲಿಯೇ ಆಡಿಕೊಳ್ಳುತ್ತಿದ್ದರು .
      ಎಲ್ಲರ ಭಾಷಣ ಮುಗಿದ ನಂತರ ನಮಗೆ ಸಿಹಿಯನ್ನು ಕೊಟ್ಟು ಒಂದು ತಿಂಗಳ ರಜೆಯನ್ನು ಘೋಷಿಸಿದರು . ಹೀಗೆ ನಮ್ಮ ಶಾಲೆಯಲ್ಲಿ ಗಾಂಧೀ ತಾತನ ಹುಟ್ಟುಹಬ್ಬ ಸಂತೋಷದಿಂದ ಆಚರಿಸುತ್ತಿದ್ದೆವು . ಹೀಗೆ ನಮ್ಮ ಶಾಲೆ ನೈತಿಕ ಶಿಕ್ಷಣದ ಕೇಂದ್ರವಾಗಿತ್ತು -ಪ್ರೀತಿಯ ನಂದನವನವಾಗಿತ್ತು . ಇಂದಿನ ದಿನ ನಾನು ನನ್ನ ಶಾಲೆಯ ಹಿಂದಿನ ಆ ದಿನಗಳನ್ನು ನೆನೆದು ಮತ್ತೆ ಚಿಕ್ಕವಳಾಗಬೇಕಲ್ಲವೇ  ? ಎಂದು ಕನವರಿಸಿದೆ. ಹಳೇ ನೆನಪುಗಳನ್ನು ನಿಮ್ಮೆಲ್ಲರ ಮುಂದೆ ಹೇಳಿ ನಾನು ಖುಷಿ ಪಟ್ಟೆ.

ಎಲ್ಲರಿಗೂ ಮಹಾತ್ಮಾ ಗಾಂಧೀಜಿ ಹುಟ್ಟುಹಬ್ಬದ ಶುಭಾಶಯಗಳು 

3 ಕಾಮೆಂಟ್‌ಗಳು: