ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಬುಧವಾರ, ಜನವರಿ 4, 2012

ನನ್ನ ಸಾಹಿತ್ಯ ದಿನದ ಅನುಭವ..



ಹೊಸ ವರುಷದ ಶುರುವಾತು ಸಾಹಿತ್ಯದಿಂದ


          ಈ ಸುದಿನ ಜನವರಿ 1, 2012 ಇಂಗ್ಲೀಷ ಕ್ಯಾಲೆಂಡರ ಪ್ರಕಾರ ಹೊಸ ವರುಷದ ಮೊದಲ ದಿನ. ನನಗೆ ಸಾಹಿತ್ಯ ಸಂತೆಯ ದಿನ. ದಿನವಿಡಿ ಸಾಹಿತ್ಯ ಗದ್ದಲದಿಂದ ತುಂಬಿದ ಸಾಹಿತ್ಯ ಸಮ್ಮೇಳನ. "ಮನ ಮನಗಳಲ್ಲಿ ಕನ್ನಡದ ಉಸಿರು, ಎದೆ ಬಡಿತವು ಹೇಳಿದೆ ಕನ್ನಡದ ಹೆಸರು, ಸಾಹಿತ್ಯದ ನುಡಿಗಳು ಹೆಪ್ಪಾಗಿದ್ದ ಮೊಸರು, ಅಧ್ಯಕ್ಷರ ಭಾಷಣದಿಂದ ಕರಗಿತ್ತು ಆಂಗ್ಲರ ಕೆಸರು" . ಈ ಸಮ್ಮೇಳನ ನಡೆದದ್ದು ನಮ್ಮ ಜಮಖಂಡಿ ತಾಲೂಕಿನ, ಸಾವಳಗಿ ಗ್ರಾಮದಲ್ಲಿ. ಕನ್ನಡಾಂಬೆಯ ಧ್ವಜವು ಆಗಸದ ತುಂಬ ಮೂಡಿತ್ತು. ಭುವನೇಶ್ವರಿ ದೇವಿಯ ಮೆರವಣಿಗೆಯಲ್ಲಿ ಕಳಸಗಳೇ ಸ್ವಾಗತ ಕೋರುವಂತಿತ್ತು. ಸಂಗೀತ- ವಾದ್ಯ ಕನ್ನಡ ಹಬ್ಬಕ್ಕೆ ಎಲ್ಲ ಕನ್ನಡಿಗರನ್ನು ಕೈ ಮಾಡಿ ಕರೆದು ನಲಿದಾಡು ಎಂದಿತ್ತು. ಪ್ರಕೃತಿಯು ಕೂಡ ಕನ್ನಡದ ಸೌಂದರ್ಯವನ್ನು ಹೆಚ್ಚಿಸಿತ್ತು.
          ಸಮ್ಮೇಳನಾಧ್ಯಕ್ಷರಾದ ಶ್ರೀ ಎಂ.ಎಸ್.ಸಿಂಧೂರ ಅವರ ನುಡಿಯು ರಾಷ್ಟ್ರಲಾಂಛನದಲ್ಲಿಯ ಸಿಂಹ ಘರ್ಜನೆಯಾಗಿತ್ತು. ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ, ಬರಹ ಕೃಷಿ, ಉದ್ಯೋಗ ಹಾಗೂ ಸರ್ಕಾರ ಕನ್ನಡದ ಅಮರ ಉಳಿವಿಗಾಗಿ ಕೈಗೊಳ್ಳಬೇಕಾದ ಹಲವು ಬದಲಾವಣೆಗಳ ವಿಚಾರಗಳನ್ನು ರಾಮನ ಬಾಣದ ಹಾಗೇ ಎಲ್ಲರ ಮನಕ್ಕೆ ಮುಟ್ಟುವ ರೀತಿ ಕೂಗಿ ಕೂಗಿ ಕನ್ನಡವನ್ನು ಕನ್ನಡಿಯಲ್ಲಿ ತೋರಿಸಿದರು.ಇಲ್ಲಿಯ ಶಾಸಕರಾದ ಶ್ರೀ ಶ್ರೀಕಾಂತ ಕುಲಕರ್ಣಿಯವರು ಸಿರಿಗನ್ನಡಂ ಗೆಲ್ಗೆ ಎಂದು ಹೇಳುತ್ತ ಕನ್ನಡ ಕನ್ನಡವೆಂದು ನಲಿದಾಡಿದರು ಮತ್ತು ಈ ತಾಲೂಕಿನ ಜನರಿಗೆಂದೆ ಇರುವ ಉಪಯುಕ್ತ ಬೇಡಿಕೆಗಳನ್ನು ಸರಕಾರದ ಮುಂದಿಟ್ಟೆದ್ದೇನೆ ಮತ್ತು ಬೇಗ ಅನುಮತಿ ದೊರಕುವುದು ಎಂದು ಆತ್ಮವಿಶ್ವಾಸದಿಂದ ನುಡಿದರು. ತೇರದಾಳ ಶಾಸಕರಾದ ಶ್ರೀ ಸಿದ್ದು ಸವದಿ, ಶ್ರೀ ನಿರುಪಾಧೀಶ ಮಹಾಸ್ವಾಮಿಗಳು, ಚನ್ನಬಸವ ಸ್ವಾಮಿಗಳು, ಡಾ. ಸಂಗಮೇಶ ಬಿರಾದಾರ ಮತ್ತು ಹಲವು ಗಣ್ಯ ವ್ಯಕ್ತಿ, ಸಾಹಿತಿಗಳು ವೇದಿಕೆ ಮೇಲೆ ಆಸೀನರಾಗಿದ್ದರು.
             ಸಾಹಿತ್ಯ ಪರಂಪರೆ ಎಂಬ ಗೋಷ್ಠಿಯಲ್ಲಿ ಕಾವ್ಯ ಮತ್ತು ನಾಟಕ, ಕಲೆ ಮತ್ತು ಕಾದಂಬರಿ,ಜಾನಪದ ಸಾಹಿತ್ಯ ಹಾಗೂ ಸಂಕೀಣಱ ಸಾಹಿತ್ಯ ಇವೆಲ್ಲವುಗಳ ಬಗ್ಗೆ ಹಿರಿಯ ಸಾಹಿತಿಗಳು ತಮ್ಮ ಅನುಭವದ ಮಾತುಗಳನ್ನು ಹೇಳಿ ಸಾಹಿತ್ಯದಲ್ಲಿರುವ ಸುಖದ ವರ್ಣನೆ ಸುಂದರವಾಗಿ ತೋರಿಸಿ ಕೊಟ್ಟರು.ಸಾಹಿತ್ಯ ಸಮ್ಮೇಳನದಲ್ಲಿ ಕಿವಿಗೆ ಕೇಳುತ್ತಿದ್ದ ಎಲ್ಲ ಶಬ್ದಗಳು ಹೃದಯಕೆ ಸವಿ ಸಾಹಿತ್ಯದ ಮೃಷ್ಟಾಣ್ಣ ಭೋಜನ ನೀಡಿದಂತಿತ್ತು.
             ಇನ್ನೂ ನನಗೆ ಪ್ರೀಯವಾದ ಗೋಷ್ಠಿ ಅದುವೇ ಕವಿಗಗೋಷ್ಠಿ. ನನಗೂ ಕೂಡ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಮಂತ್ಇಸಿದ್ದರು. ನನಗಾದ ಖುಷಿಗೆ ಅಂತ್ಯವಿಲ್ಲ ಆದರೂ ಹೆದರಿಕೆ ನನ್ನನ್ನೂ ಬೆದರಿಸುತ್ತಿತ್ತು.ನನ್ನ ಕವಿಗುರುಗಳಾದ ಡಾ.ಮಾಳಿಯವರ ಆಶಿರ್ವಾದ ಮತ್ತು ನನ್ನ ಸಂಗಾತಿಯ ವಿಶ್ವಾಸ ನನ್ನ ಆತಂಕವನ್ನು ಕಡಿಮೆ ಮಾಡಿತ್ತು. ಇದಕ್ಕಿಂತ ಮೊದಲು ಕೂಡ ನಾನು ಅಥಣಿ ತಾಲೂಕಿನ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸುವ ಅವಕಾಶ ದೊರಕಿ ತುಂಬ ಖುಷಿಯಾಗಿತ್ತು ಆದರೆ ಅದು ನನ್ನ ಸ್ವಂತ ಗುರುತಿಲ್ಲದ ಪ್ರತಿಭೆ ಎನಿಸಿತ್ತು. ಈ ದಿನದಂದು ನನ್ನ ಚಿಕ್ಕ ಪ್ರಯತ್ನದ ದೊಡ್ಡ ಫಲವಾಗಿ ತಾಲೂಕಾ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿಯಲ್ಲಿ ಆಮಂತ್ರಿಸಲಾಗಿತ್ತು.
               ಶ್ರೀ ಸಿದ್ಧರಾಜ ಪೂಜಾರಿ ಅವರು ಕವಿಗೋಷ್ಠಿಯ ಅಧ್ಯಕ್ಷರು. ಆಶಯ ನುಡಿಗಳನ್ನು ಮಕ್ಕಳ ಸಾಹಿತಿಯೊಬ್ಬರು ಸುಂದರವಾಗಿ ನುಡಿದು ನಮಗೆಲ್ಲರಿಗೂ ಅಭಿನಂದನೆ ತಿಳಿಸಿದರು. ಕವನವಾಚನ ಶುರುವಾಗುತ್ತಿದ್ದಂತೆ ನನ್ನ ಎದೆಬಡಿತ ಜ್ವಾಲಾಮುಖಿಯ ಹಾಗೇ ಕಂಪಿಸುತ್ತಿತ್ತು.ನಯವಾದ ನಯನಗಳು ನನ್ನ ಸ್ಫೂರ್ತಿ ಸಂಗಾತಿಯನ್ನ ಶೋಧಿಸುತ್ತಿತ್ತು. ಹೃದಯ ದೇವಗುರುವಿನ ಆಶಿರ್ವಾದ ಬಯಸಿತ್ತು. ಉಳಿದ 15 ಕವಿಗಳು ತುಂಬಾ ದೊಡ್ಡವರು ನ್ನ ಕವನ ಹೇಗೆನಿಸುವುದೋ ಎಂಬ ವಿಚಾರ ಮನದಲ್ಲಿ ಮನೆಮಾಡಿತ್ತು. ಕೆಲವರು ಕವನ ಓದಿದ್ದಾಯಿತು. ಎಲ್ಲ ಕವನಗಳು ಸುಂದರವಾಗಿದ್ದವು.  ನನ್ನ ಹೆಸರು ಕರೆದಾಗ ಎದ್ದು ನಾನು ಬರೆದ ಮತ್ತು ನನ್ನ ಗುರುಗಳು ತಪ್ಪುಗಳನ್ನು ತಿದ್ದಿದ 'ಬೃಂದಾವನ' ಎಂಬ ಕವನ ಶೀರ್ಷಿಕೆಯಿಂದ ಶುರುವಾಗಿ 'ಬದುಕಿನ ದಿನಗಳೆಲ್ಲ ಬೃಂದಾವನವಾದರೆ .. ಬದುಕೆಲ್ಲವೂ ಮೈ-ಸೂರು ' ಎಂದು ಹೇಳತ್ತ ಮುಕ್ತಾಯವಾಯಿತು.
ನನ್ನ ಕವನದ ಹೆಸರು: "ಬೃಂದಾವನ"
ಬಣ್ಣ ಬಣ್ಣದ ಮೀನು
ಮಿಂಚು ಮಿನುಗುವ ಕಣ್ಣು
ನಿನ್ನ ಜೊತೆಗಿನ ಆಟ
ನಯನಗಳ ಚೆಲ್ಲಾಟ
ಮುಟ್ಟಿ ನೋಡು ಎಂದು 
ಮುತ್ತು ಕೊಡಲು ಬಂದು 
ಪ್ರೀತಿಸದ ಹಾಗೆ ಕಣ್ಣು ಮಿಟುಕಿಸಿದವು 
ಬೃಂದಾವನದ ಮೀನು

ಹಸಿರು ಹುಲ್ಲಿನ ಗರಿಕೆ
ಅಪ್ಪಿಕೊಳ್ಳುವ ಬಯಕೆ
ಮಂಜು ಹನಿಗಳ ಮುತ್ತು
ನಕ್ಷತ್ರಗಳ ಗಮ್ಮತ್ತು 
ಹೂಗಳ ನಗುವು, ಪ್ರೀತಿಯ ನೋಟ
ನಿಸರ್ಗ ಸುಖದ ಅನುಭವದೂಟ
ಬೃಂದಾವನದ ಹಸಿರು ಉಸಿರಲ್ಲಿ ಕಂಡೆವು

ಕೃಷ್ಣರಾಜಸಾಗರದ ತುಂಬ 
ಗೋಪಿಕೆಯರ ಕನಸುಗಳು
ಗೆಜ್ಜೆ ಕಟ್ಟಿಕೊಂಡು ನರ್ತಿಸುವ
ರಾಗ ಕಾಮನಬಿಲ್ಲಗಳು
ನಾದಕ್ಕೆ ತಾಳ ಹಾಕುವ ಕಾರಂಜಿಗಳ
ಕಣ್ಣಿನೊಳಗೆ ಪುಣ್ಯ ತುಂಬುವ ಸ್ಥಳವಿದು

ಇಲ್ಲಿಯ ಹಸಿರು ನೀರಿನ ಉಸಿರು
ಬಣ್ಣ ಕಾರಂಜಿ ನವಿಲುಗಣ್ಣು
ಗೆಳೆಯಾ ಇದು ಮೈ-ಸೂರು
ಸೌಂದರ್ಯದ ಸೂರು
ಬದುಕಿನ ದಿನಗಳೆಲ್ಲ ಬೃಂದಾವನವಾದರೆ ..!
ಬದುಕೆಲ್ಲವೂ  ಮೈ-ಸೂರು

              ಈಗ ನನ್ನೆದೆಯ ಬಡಿತ ಸೌಮ್ಯವಾಗಿತ್ತು. ಮುಖದಲ್ಲಿ ಮಂದ ನಗುವು ಅರಳಿತ್ತು. ಉಳಿದೆಲ್ಲರ ಕವನವಾಚನ ಮುಗಿದ ಮೇಲೆ ಕವಿಗೋಷ್ಠಿ ಅಧ್ಯಕ್ಷರ ಹಿತನುಡಿಗಳ ಸುರಿಮಳೆ ಸುರಿದಿತ್ತು. ಯುವ ಬರಹಗಾರರನ್ನು ಪ್ರೋತ್ಸಾಹಿಸಿದರು.ಕವಿಗಳಿಗೆ ಕಲವು ಕಿವಿಮಾತುಗಳನ್ನು ಹೇಳಿ ಬರಹ ಹೇಗಿರಬೇಕು?, ಭಾವ ತುಂಬಿರಬೇಕು ಎಂದು ಸರಳ ಸುಂದರವಾಗಿ ಬಿಡಿಸಿ ಹೇಳಿದರು. ಅವರ ಕವಿಮನದ ಕವನಗಳನ್ನು ಹೇಳಿ ಕವಿಗಳಿಗೆ ಪ್ರೋತ್ಸಾಹಿಸಿದರು. 
              ಉಳಿದ ಕೆಲ ಕವಿಗಳು ನನ್ನ ಕವನ ಕೇಳಿದ ನಂತರ ಮೈಸೂರಿಗೆ ಹೋಗಿ ಬಂದೆನಿಸಿತು ಅಂದರು. ವಾಚನ ಸುಂದರವಾಗಿತ್ತೆಂದರು. ನನ್ನ ಮೊಗದಲ್ಲಿ ಸಂತಸದ ಹೂವು ಅರಳಿ ಪಾತರಗಿತ್ತಿಯಾದ ನನ್ನ ಸಂಗಾತಿಯನ್ನು ನೆನೆಪಿಸಿತ್ತು. ನನಗೆ ಕವಯತ್ರಿ ವಿಮಲಾ ಬೊಮ್ಮನಹಳ್ಳಿಯವರು ಬರೆದ ಹೆಣ್ಣು ಎಂಬ ಕವನ ಅತಿಪ್ರೀಯವಾಗಿತ್ತು. ಸಮಾಜದಲ್ಲಿ ಉಪಯೋಗವಾಗುವ ಅಂದ್ರೆ ಎಲ್ಲರ ಮನಸ್ಸಿಗೆ ಮುಟ್ಟಿ ಸತ್ಯದ ಮತ್ತು ಒಳ್ಳೆತನದ ನಂದಾದೀಪ ಬೆಳಗಲು ಸಹಾಯವಾಗುವ ಕವನಗಳನ್ನು ನಾನು ಬರೆಯಬೇಕೆಂಬ ಮಹದಾಸೆ ಮನದಲ್ಲಿ ಮೂಡಿತ್ತು. ಕವಿ ಶಂಕರ ಲಮಾಣಿಯವರ ಕವನವಾಚಿಸುವ ಧ್ವನಿಯು ರಾಜಮಹಲಿನಲ್ಲಿ ಆಜ್ಞೆ ಘೋಷಿಸಿದಂತಿತ್ತು ಹಾಗೂ ಕನ್ನಡಿಗರನ್ನು ಎಚ್ಚರ ಕವನದಿಂದ ಎಚ್ಚರಿಸಿದಂತಿತ್ತು. ಕವಯತ್ರಿ ಶೋಭಾ ಕಾಗಿ ಅವರ ಅಮ್ಮ ಕವನವನ್ನು ಗಾಯನವಾಗಿ ನುಡಿದಾಗ ಮಕ್ಕಳಿಗೆ ಅಮ್ಮನ ಮತ್ತು ಅಮ್ಮನಿಗೆ ಮಕ್ಕಳ ನೆನೆಸುವಂತಿತ್ತು. ಕೆಲ ಕವಿಗಳು ಆಡು ಭಾಷೆಯಲ್ಲಿ ಚೆಂದಾದ ಕವನ ರಚಿಸಿದ್ದರು. ಕವಿಗೋಷ್ಠಿ ಸಾಹಿತ್ಯದ ಸೌಂದರ್ಯವನ್ನು ಹೆಚ್ಚಿಸಿತ್ತು.
              ವಿಶೇಷ ಉಪನ್ಯಾಸದಲ್ಲಿ ಶ್ರೀ ಬಸವರಾಜ ಯಡಹಳ್ಳಿಯವರು ಸಮ್ಮೇಳನಾಧ್ಯಕ್ಷರ ಬದುಕು ಬರಹದ ಕುರಿತು ಹೇಳಿದ್ದು ತುಂಬಾ ಶ್ಲಾಘನೀಯ. ತಾಲೂಕ ಮುಳುಗಡೆ ಸಂತ್ರಸ್ತರು ಮತ್ತು ಪತ್ರಿಕಾ ಪರಂಪರೆ ಎಂಬ ವಿಷಯದ ಮೇಲೆ ಶ್ರೀ ಬಾಬುರೆಡ್ಡಿ ತುಂಗಳ ಅವರು ಉಪನ್ಯಾಸ ನೀಡಿ ಕನ್ನಡಿಗರ ವೀರ ಗುಣ ಬೆಳೆಸಿಕೊಳ್ಳು ಸಹಾಯ ಮಾಡಿದರು. ಪ್ರಜೆಗಳಾಗಿ ಕೇಳುವ ಕೆಲ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು.
              ಇನ್ನೂ ಎಲ್ಲರು ಆಕರ್ಷಣೆಗೆ ಒಳಗಾಗಿಸುವ ಕಾವ್ಯ-ಗಾಯನ-ಕುಂಚ ಕಾರ್ಯಕ್ರಮ ಶುರುವಾಯಿತು. ಶ್ರೀ ಅರ್ಜುನ ಕೋರಟಕರ ಅವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿಗಳಾದ ಗಿರೀಶ ಕಾಂಬಳೆ, ಶಾರದಾ ಮುಳ್ಳೂರ, ಕಲ್ಲೇಶ ಕುಂಬಾರ, ಚಿತ್ತರಂಜನ ನಾಂದ್ರೇಕರ ಮತ್ತು ಶಿವಾನಂದ ಬಾಗಲಕೋಟಮಠ ಕವನವಾಚನ ಮಾಡಿದರು. ಗಾಯಕರಾದ ರಾಘವೇಂದ್ರ ಕಟ್ಟಿ, ನೇಹಾ ಮೈಗೂರ,ಸರಸ್ವತಿ ಸಬರದ ಇವರೆಲ್ಲರೂ ಸ್ವರ ಸಂಗೀತದ ಅಲೆಗಳನ್ನೆಬ್ಬಿಸಿದರೆ ಕುಂಚ ಕಲಾವಿದರಾದ ಪ್ರಸಿದ್ಧ ಬಸವರಾಜ ಗವಿಮಠ, ರಶ್ಮಿ ಗವಿಮಠ, ಚೌಧರಿ, ಹಂಪಣ್ಣವರ ಮತ್ತು ತುಕ್ಕಣ್ಣವರ ಇವರೆಲ್ಲರೂ ಬಣ್ಣ ಬಣ್ಣಗಳ ಕವನಗಳನ್ನು ಚಿತ್ರಿಸಿದರು. ಎಲ್ಲ ಕವನಗಳು ಗಾಯನವಾದಾಗ ಹೃದಯದಲ್ಲಿ ವೀಣೆ ಬಾರಿಸಿದಂತಾಗಿತ್ತು. ಕೆಲವೇ ಕ್ಷಣಗಳಲ್ಲಿ ಬಿಡಿಸಿದ ಚಿತ್ತಾರ ಮುಂಗಾರು ಮಳೆಯಲ್ಲಿ ಕಾಮನಬಿಲ್ಲನು ನೋಡಿದಷ್ಟು ಖುಷಿಯಾಗಿತ್ತು.
               ಕೊನೆಯದಾಗಿ ಸನ್ಮಾನ ಮತ್ತು ಸಮಾರೋಪ ಸಮಾರಂಭದಲ್ಲಿ  ಇಲ್ಲಿಯ ಹಲವು ಮಹನೀಯರಿಗೆ ಸನ್ಮಾನ ಮಾಡಲಾಯಿತು. ಜಮಖಂಡಿಯ ತಹಶೀಲ್ದಾರರಾದ ಡಾ.ಸಿದ್ದು ಹುಲ್ಲೋಳಿಯವರು ತಮ್ಮ ಆಶಯ ನುಡಿಯಲ್ಲಿ ಮನಸೂಕ್ತ  ಕನ್ನಡದ ಪ್ರೇಮವನ್ನು, ಕನ್ನಡದ ಗೌರವವನ್ನು ಎತ್ತಿ ಹಿಡಿದರು. ನಮ್ಮ ತಾಲೂಕಿನಲ್ಲಿ ಸಾಹಿತಿಗಳ ಸಂಖ್ಯೆ ಅಪಾರವೆಂದು ಹೇಳಿ ಖುಷಿ ಪಟ್ಟರು ಮತ್ತು ಮುಂದಿನ ಕೆಲವು ತಿಂಗಳಲ್ಲಿ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನ ಜಮಖಂಡಿಯಲ್ಲಿ ನಡೆಯಬೇಕು ಮತ್ತು ಎಲ್ಲ ತರಹದ ಸಹಾಯ ಈ ಕನ್ನಡ ಭೂಮಿಗಾಗಿ ಮಾಡುವೆನೆಂದು ಕರ್ತವ್ಯಬದ್ಧರಾಗಿ ಹೇಳಿ ಎಲ್ಲ ಹೃದಯಗಳ ಪ್ರೀತಿಯ ಚಪ್ಪಾಳೆಗೆ ಪಾತ್ರರಾದರು. ಇನ್ನೂ ವಿಶೇಷವೆಂದರೆ ಎಂಬತ್ತು ವರುಷ ವಯಸ್ಸಿನ ಸಾಹಿತಿಗಳೊಬ್ಬರು ಈ ಸಮ್ಮೆಳನದಲ್ಲಿ ಉಪಸ್ಥಿತರಿದ್ದು ಸಮಾರೋಪ ಸಮಾರಂಭದ ಕಳೆಯನ್ನು ಹೆಚ್ಚಿಸಿದ್ದರು. ಆ ಮಹಾನ್ ಸಾಹಿತಿಗಳ ಹೆಸರು ಡಾ.ಪಂಚಾಕ್ಷರಿ ಹಿರೇಮಠ. "ಅವರ ಧ್ವನಿಯಲ್ಲಿ ಯುವಜನರ ಕೂಗಿತ್ತು. ಮೊಗದಲಿ ಸಂತಸದ ಕಮಲ ಅರಳಿತ್ತು, ಅವರಲ್ಲಿ ಕನ್ನಡ, ಹಿಂದಿ, ಉರ್ದು ಭಾಷೆಗಳ ಜ್ಞಾನಭಂಡಾರವಿದೆ. ಬರವಣಿಗೆ ಮತ್ತು ಓದು ಅವರ ಬದುಕಾಗಿದೆ. ಪ್ರೀತಿ, ಅಕ್ಕರೆ, ವಿಶ್ವಾಸ ಮತ್ತು ಒಳ್ಳೆತನವೇ ಅವರ ಮೆಚ್ಚುಗೆಯ ವಸ್ತುಗಳು. ಜೀವನದಲ್ಲಿ ಬೇಸರಗೊಳ್ಳದೆ ಸುಂದರ ಮಧುರ ಕವನದ ಹಾಗೇ ಬಾಳಬೇಕೆಂದರು. ಕೊನೆಗೆ ಎಲ್ಲರಿಗೂ ಜೀವನದಲ್ಲಿ ಸುಖಿಯಾಗಿರಿ ಎಂದು ಹಾರೈಸುತ್ತ ಸಾಹಿತ್ಯ ಸಮ್ಮೇಳನಕ್ಕೆ ಪೂರ್ಣವಿರಾಮವಿಟ್ಟರು. ಜೈ ಕರ್ನಾಟಕ.

ಇಂದ,
ಸಿದ್ಧಕೀರ್ತಿ ಪ್ರಕಾಶನ,
ಕೀರ್ತೀ ಸಿದ್ದು ಹುಲ್ಲೋಳಿ
ಜಮಖಂಡಿ.

{ ನನ್ನ ಸಾಹಿತ್ಯ ದಿನದ ಸುಖವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತ್ತು ಆದ ಕಾರಣ ಎಲ್ಲ ಓದುಗರಿಗೂ ನನ್ನ ಮನಸ್ಸಾರೆ ಧನ್ಯವಾದಗಳು.}
                 

2 ಕಾಮೆಂಟ್‌ಗಳು: