ನೀನು ನನ್ನ ಜೀವ

ನೀನು ನನ್ನ ಜೀವ
ನನ್ನ ಜೀವ ನೀನು ನಿನ್ನ ಜೀವ ನಾನು, ನಮ್ಮಿಬ್ಬರ ಜೀವದ ಭಾವನೆಗಳು ಕವಿತೆಯಾಗಿ ಮೂಡಿ ಜೀವನವ ಸುಂದರಗೊಳಿಸಿದೆ.

ಗುರುವಾರ, ಜುಲೈ 21, 2011

ನಾನು ಯಾರು ??

ನಾನು ನಕ್ಕರೆ
ಅಕ್ಕರೆ ಬರುವುದು
ನಾನು ಅತ್ತರೆ
ಕತ್ತಲೆ ಹರಡುವುದು
ನಾನು ಖುಷಿಯಾದರೆ
ಮಳೆ ಸುರಿಯುವುದು
ನಾನು ದು:ಖಿಸಿದರೆ
ಭೂಮಿ ಬರಡಾಗುವುದು
ನಾನು ಕೋಪಗೊಂಡರೆ
ಜ್ವಾಲಾಮುಖಿ ಏಳುವುದು
ನಾನು ಸುಮ್ಮನಿದ್ದರೆ
ಸುಂದರತೆ ಹೆಚ್ಚುವುದು
ನಾನು ಪ್ರೀತಿಸಿದರೆ
ಬೆಳದಿಂಗಳ ರಾತ್ರಿಯಾಗುವುದು
ನಾನು ದ್ವೇಷಿಸಿದರೆ
ಸಿಡಿಲು ಗುಡುಗು ಕೇಳುವುದು
ನಾನು ಮೌನಿಯಾದರೆ
ಪ್ರೇಮಿಗಳ ಮಿಲನವಾಗುವುದು
ನಾನು ಯಾರು! ನಾನು ಯಾರು!

ನಾನು  ನಿಸರ್ಗ


ನೊಂದ ಜೀವ

ಸಂಜೆಯ ಸೊಬಗಿನಲಿ
ಮನಸ್ಸಿತ್ತು ಮೌನದಲಿ
ಏಕಾಂಗಿ ಹೃದಯ
ಸೋತಿತ್ತು ದು:ಖದಲಿ

ಕೋಪದ ಗಳಿಗೆಯಲಿ
ಮುಳುಗಿತ್ತು ಚಿಂತೆಯಲಿ
ಅಶಾಂತ ಮನಸ್ಸು
ಒದ್ದೆಯಾಗಿತ್ತು ಕಣ್ಣೀರಿನಲಿ

ಕ್ಷಣ ಕ್ಷಣಗಳಲ್ಲಿ
ಜೊತೆಗಾರನ ನೆನಪಿನಲಿ
ಸುಂದರ ಮುಖವು
ಮುದುಡಿತ್ತು ಬೇಸರದಲಿ

ಅಶಾಂತ ಚಿತ್ತದಲಿ
ಕೊರಗಿತ್ತು ಜೀವನದಲಿ
ಮುದ್ದಾದ ಹೃದಯವ
ಕಿತ್ತೆಸೆಯಿತು ಪ್ರೀತಿಯಲಿ

ಮೊಬೈಲ ಹುಡುಗ




ಸ್ನೇಹ ಪ್ರೀತಿಯ ಈ ಹುಡುಗ
ಸಾದಾ ಸೀದಾ ಬಲು ಜೋರ
ಎಲ್ಲರ ಹೃದಯ ಕದಿಯುವ ಬೇಗ
ಸ್ಲಿಮ್ ಸಿಮ್ಮನ್ನು ಇರಿಸಿದ
ಇವನಿಗೆ ಒಬ್ಬಳು ಬೇಡಿಗ
ಎರಡು ಹುಡುಗಿಯರ ಪ್ರೀತಿಸಿದ
ಗೆಳೆತನ ಬಯಸಿ ಮನವ ಕದಿಯಲು
ಇಂಟರನೆಟನ್ನು ಅಳವಡಿಸಿದ
ಬೋರಾದಾಗ ಮಜ ಮಾಡಲು
ಲೌಡಸ್ಪೀಕರ ಹಾಡು ಹಚ್ಚಿದ
ಚೆಂದದ ಹುಡುಗಿ ಕಾಣಿಸಿದರೆ
ಕ್ಯಾಮೆರಾದಿಂದ ಕ್ಲಿಕ್ಕಿಸಿದ
ನೆನಪುಗಳನ್ನು ಎದೆಯಲಿ ಬರೆಯಲು
ಮೆಮರಿ ಕಾರ್ಡನ್ನು ಹಾಕಿಸಿದ
ಕಳ್ಳ ನಲ್ಲ ತುಂಟಾಟಕೆ
ಮೆಸ್ಸೆಜ ಕಳುಹಿಸಿ ಅವಳನ್ನು ಪ್ರೀತಿಸಿದ
ಮಧುರ ಧ್ವನಿಯ ಆಲಿಸಲು
ಫೋನನಲ್ಲಿ ಮಾತಾಡಿ ಆನಂದಿಸಿದ







ಎಲ್ಲಿರುವೆ ??




ಸುಮ್ಮನೆ ನಾನು ನಿಂತಿರುವಾಗ
ಗೆಳೆಯ ನೀನು ಬಳಿ ಬಂದೆ
ಸದ್ದು ಮಾಡದೆ ಮೆಲ್ಲ ಮೆಲ್ಲನೆ

ನನ್ನ ನೆರಳಲಿ ನಲಿದಾಡಿದೆ
ನಾನು ದೂರ ಓಡಿ ಹೋದರೆ

ನೀನೆಲ್ಲೊ ಮರೆಯಾದೆ
ಬಾರೊ ಬೇಗ ನನ್ನ ನಲ್ಲ
ಈ ಹೃದಯ ನಿನ್ನ ಪ್ರೀತಿಸಿದೆ



ಮಂಗಳವಾರ, ಜುಲೈ 19, 2011

ಮರಿ ಅಂದ್ರ ಹ್ಯಾಂಗ ಮರೀಲಿ

ಮರಿ ಅಂದ್ರ ಹ್ಯಾಂಗ ಮರೀಲಿ

ಮರಿ ಅಂದ್ರ ಹ್ಯಾಂಗ ಮರೀಲಿ



ಮೊದಲ ಸಲ ನೋಡಿ ನಾಚಿದಾಗ

ನಿನಗೆ ನಾ ಇಷ್ಟವೆಂದು ತಿಳಿದಾಗ

ಕದ್ದ ಕನಸಿನಲ್ಲಿ ಮನಸ್ಸು ಕೊಟ್ಟಿದನ್ನ

ಮರಿ ಅಂದ್ರ ಹ್ಯಾಂಗ ಮರೀಲಿ


ಮನ್ಯಾಗ ಹೇಳದ ಭೇಟಿ ಆದಾಗ


ಇದ್ದಂತ ಅರಿವ್ಯಾಗ ನೀ ನನ್ನ ನೋಡಿದಾಗ

ಚಂದ ಕಾಣ್ತೀಯೆಂದು ಫೋಟೋ ತಗೆದಿದ್ದನ್ನ

ಮರಿ ಅಂದ್ರ ಹ್ಯಾಂಗ ಮರೀಲಿ



ರಗ್ಗಿನ ಒಳಗೆ ರಾತ್ರಿ ಮೊಬೈಲಿನಲ್ಲಿ ಮಾತಾಡಿದಾಗ

ಅದನ್ನ ಅವ್ವ ಅಪ್ಪ ಕೇಳಿಸಿಕೊಂಡಾಗ

ರಾತ್ರಿ ಪುಸ್ತಕ ಓದ್ತಿದ್ದೆ ಎಂದು ಸುಳ್ಳು ಹೇಳಿದನ್ನ

ಮರಿ ಅಂದ್ರ ಹ್ಯಾಂಗ ಮರೀಲಿ



ಕನಸಿನ್ಯಾಗ ನೀ ಬಂದು ಕರದಂಗಾಗಿ

ಮಂಚದ ಮೇಲಿಂದ ಕೆಲ ಬಿದ್ದಾಗ

ಸೊಂಟ ಮುರಿದರು ನಿನ್ನ ನೆನಪಾಗಿ ನಗುತ ಎದ್ದಿದ್ದನ್ನ

ಮರಿ ಅಂದ್ರ ಹ್ಯಾಂಗ ಮರೀಲಿ



ಅಪ್ಪ ಅವ್ವಗ ನಮ್ಮ ಪ್ರೀತಿ ತಿಳಿದಾಗ

ನನ್ನ ಮ್ಯಾಲಿನ ಪ್ರೀತಿ ಅವರನ್ನ ಒಪ್ಪಿಸಿದಾಗ

ನನಗಾದ ಖುಷಿಗೆ ನಾ ಓಡಿ ಬಂದು ನಿನಗ ಅಪ್ಪಿದನ್ನ

ಮರಿ ಅಂದ್ರ ಹ್ಯಾಂಗ ಮರೀಲಿ



ಮದುವೀಗಿ ಒಂದು ವರುಷ ಕಳೆದಾಗ

ನಿನಗ ನನ್ನ ಮ್ಯಾಲಿನ ಪ್ರೀತಿ ಕಡಿಮಿ ಆದಾಗ

ನನ್ನನ್ನ ಮರೆತು ತಿರಗಿ ಬರಬ್ಯಾಡಂತ ಹೇಳಿದನ್ನ

ಮರಿ ಅಂದ್ರ ಹ್ಯಾಂಗ ಮರೀಲಿ



ನನ್ನ ಪ್ರೀತಿ ಅವನು ಮರೆತಾಗ

ನಾ ಇದ್ದು ಜಗದಾಗ ಇಲ್ಲದಾಂಗ

ವಿಷ ಕುಡಿಯುವಾಗ ತವರಮನಿ ನೆನಪಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದನ್ನ

ಮರಿ ಅಂದ್ರ ಹ್ಯಾಂಗ ಮರೀಲಿ



ಮರಿ ಅಂದ್ರ ಹ್ಯಾಂಗ ಮರೀಲಿ

ಮರಿ ಅಂದ್ರ ಹ್ಯಾಂಗ ಮರೀಲಿ

ಸೋಮವಾರ, ಜುಲೈ 18, 2011

ನನ್ನವನು

ನಿನ್ನ ನೆನಪಿನ ಮೋಡ 
ಕಣ್ಣೀರಿನ ಮಳೆ ಸುರಿಸಿದೆ 
ಒದ್ದೆಯಾದ ಹೃದಯಕೆ 
ಕಾಣುವ ಬಯಕೆ ಹುಟ್ಟಿದೆ 
ಮಧುರ ಕ್ಷಣಗಳ ತಂಪು 
ನನ್ನೆದೆಯ ಬೆಚ್ಚಗೆ ಮಾಡಿದೆ 
ಮುಚ್ಚಿದ ಕಣ್ಣುಗಳಿಗೆ 
ನೀ ಮುತ್ತಿಟ್ಟ೦ತಾಗಿದೆ 
ಮನವು ತೇಲಿ ತೇಲಿ 
ಪ್ರೀತಿ ಸಾಗರದಲಿ ಮುಳುಗಿದೆ 
ನನ್ನುಸಿರು ನಿಂತರು 
ನಿನ್ನುಸಿರು ನನ್ನ ಬದುಕಿಸಿದೆ 
ಕನಸಿನಲ್ಲೂ ಮನಸ್ಸಿನಲ್ಲೂ 
ನಿನ್ನ ಪ್ರೀತಿ ನನ್ನದಾಗಿದೆ 

ಸೋಮವಾರ, ಜುಲೈ 4, 2011

ನನ್ನ ಕವನ ಸಂಕಲನದ ಆನಂದ

                                                    

       ಅಂದು ಜೂನ್ ೩೦, ಗುರುವಾರ ಸಂಜೆ ೬ ರ ಹೊತ್ತು ನನ್ನ "ಹಸೆಯ ಮೇಲಣ ಹಾಡು" ಎಂಬ ಚೊಚ್ಚಲ ಕವನ ಸಂಕಲನದ ಬಿಡುಗಡೆ ಸಮಾರಂಭ.ಮರೆಯಲಾರದ ಸ್ಮರಣೀಯ ದಿನದ ಅಮೃತ ಗಳಿಗೆಯದು . ಎರಡು ವರ್ಷದಲ್ಲಿ ನಾ ಕಂಡ ಕನಸ್ಸನ್ನು ನನಸಾಗಿ ಮಾಡಿದ    " ನನ್ನೆದೆಯ ಬಡಿತ 
                                ಪ್ರೀತಿಯ ಉಸಿರು 
                                ಒಲುಮೆಯ ಜೀವ ಜೀವಾಳ 
                                ಸಂಗಾತಿ ಡಾ.ಸಿದ್ದು ಅವರಿಗೆ ಅರ್ಪಣೆ ಮಾಡಿದ ಕವನ ಸಂಕಲನವಿದು.ನನ್ನ ದಾಂಪತ್ಯ ಜೀವನದಿಂದ ಆಯ್ದ ಪ್ರೀತಿಯ ಹನಿಗಳನ್ನು ಪೋಣಿಸಿ ಸುಂದರ ಹಾರವನ್ನು ಧರಿಸಿ ಹಸೆಯ ಮೇಲಿರುವಾಗ ಮೌನದ ಮನದಲ್ಲಿ ಮೂಡಿದ ಕವಿತೆಗಳಿವು.ಅವು 'ಹಸೆಯ ಮೇಲಣ ಹಾಡು'.
      ವಿಜಾಪೂರದ ಬುದ್ಧಿಜೀವಿ ಶ್ರೀ ಸಿದ್ಧೇಶ್ವರ ಸ್ವಾಮಿಜಿಯವರ ಹಸ್ತದಿಂದ ಲೋಕಾರ್ಪಣೆಗೊಂಡ ನನ್ನ ಕವನ ಸಂಕಲನ ಬಹಳ ಪುಣ್ಯಗಳಿಸಿತ್ತು. ಆ ದಿನದ ಮತ್ತೊಂದು ವಿಶೇಷವೆಂದರೆ ಕವಿಗೊಷ್ಟಿಯು ಆಯೋಜಿಸಲಾಗಿತ್ತು. ನಾನು ಜಸ್ಟ್ ಪಾಸ್ ಆಗಿ ಕವಯತ್ರಿ ಪದವಿ ತೆಗೆದುಕೊಳ್ಳುತ್ತಿದ್ದೆ ಆದರೆ ಅಲ್ಲಿ ಉಳಿದ ೧೧ ಕವಿಗಳು ತುಂಬಾ ಮೆಚ್ಚುಗೆ ಪಡೆದವರಾಗಿದ್ದರು.ಅವರ ಜೊತೆ ನನಗೆ ಕವನ ಓದಲು ತುಂಬಾ ಖುಷಿಯೇನಿಸಿತ್ತು.ಅದೇ ದಿನ ಕವಿ ಮತ್ತು ಲೇಖಕ ಕಲ್ಲೇಶ ಕುಂಬಾರ ಅವರ 'ಉರಿಯ ನಾಲಿಗೆಯ ಮೇಲೆ' ಕಥಾಸಂಕಲನ ಲೋಕಾರ್ಪಣೆಯಾಯಿತು. 
      ಕವನ ಬರೆಯುವ ಕಲೆ ತವರಿನಲ್ಲಿ ಮೊಳೆತದ್ದು,ಚಿಗುರಿದ್ದು ಸಪ್ತಪದಿಯಲ್ಲಿ, ಹೂತಿದ್ದು ನಮ್ಮ ದಾಂಪತ್ಯದ ಹಸೆಯಲ್ಲಿ.ನನ್ನ ಬದುಕನ್ನು ಒಪ್ಪಿ ಅಪ್ಪಿ ಎದೆಯಲ್ಲಿ ಕವಿತೆಯ ಒರತೆ ತೊಡಿದವರು ನನ್ನ ಸಂಗಾತಿ.ಅವರೇ ನನ್ನ ಬದುಕಿನ ಪ್ರೀತಿಯ ಪ್ರತೀಕ.
      ನನ್ನ ಗುರುಗಳಾದ ಡಾ.ವಿ.ಎಸ.ಮಾಳಿಯವರು ಹಾರೂಗೆರಿಯವರು.ನನ್ನ ಕವನ ಸಂಕಲನದ ಹಿಂದಿನ ಪುಟವನ್ನು ತಮ್ಮ ಮನಸ್ಸಿನ ಚೆಂದಾದ ಮಾತುಗಳಿಂದ ಅಲಂಕರಿಸಿದವರು. ಇವರು ಹೇಳಿದ್ದು- 'ಕವಿತೆಗಳೆಂದರೆ ಅಕ್ಷರಗಳಲ್ಲಿ ಸಂವೇದನೆಗಳ ಸಾಕ್ಷಾತ್ಕಾರ'. ಮದುವೆಯ ಹೊಸತರಲ್ಲಿ ಕ್ಷಣ ಕ್ಷಣಗಳೆಲ್ಲ ಸುಂದರ ಮತ್ತು ಮಧುರ.ಸಲ್ಲಾಪದ ಮುದ್ದು ಮುದ್ದು ಮಾತುಗಳು ಜೇನಿನಲ್ಲಿ ಅದ್ದಿ ಇಟ್ಟಂತೆ ಕೀರ್ತಿಯವರ ಕವಿತೆಗಳು ಜಾಮೂನಿನಂತೆ! ಮುದ್ದನನಂಥ ಗಂಡನಿಗೆ ಮನೋರಮೆಯಮ್ಥ ಹೆಂಡತಿ ಜತೆಯಾದಾಗ ಇಂಥದೊಂದು 'ದಾಂಪತ್ಯ ಕಾವ್ಯ'ಹುಟ್ಟಿಕೊಳ್ಳುತ್ತದೆ.
     ಈ ಸಂಕಲನ ಹೊರಬರಲು ಪ್ರೇರಣೆ ನೀಡಿದ ಎಲ್ಲ ಬ್ಲಾಗ ಸ್ನೇಹಿತ-ಸ್ನೇಹಿತೆಯರೆಲ್ಲರಿಗೂ ನನ್ನ ಪ್ರೀತಿಯ ಕೃತಜ್ನ್ಯತೆಗಳು.ನನ್ನ ಕವನಗಳಿಗೆ ನೀವು ನೀಡಿದ ವಿಶ್ವಾಸ,ಪ್ರೀತಿ, ಸಹಕಾರ ಮತ್ತು ಸ್ಪೂರ್ತಿಗೆ ನನ್ನ ಅನಂತ ಧನ್ಯವಾದಗಳು .ಕೊನೆಯದಾಗಿ ಈ ಕೀರ್ತಿಯ ಕನಸು ನನಸಾಗಿಸಲು ಸಹಕರಿಸಿ ಹರಸಿರಿ.